ವಾಷಿಂಗ್ಟನ್ : ಅಮೆರಿಕಾದ ಒಕ್ಲಾಹೋಮ ಪ್ರದೇಶದ ಖ್ಯಾತ ಗಾಯಕ, ಗೀತಾ ರಚನಾಕಾರ ಜೇಕ್ ಫ್ಲಿಂಟ್(37) ಮದುವೆಯಾದ ಕೆಲವೇ ಗಂಟೆಗಳಲ್ಲಿ ನಿಧನರಾಗಿದ್ದಾರೆ ಓಕ್ಲಾಹೋಮನ್ ವರದಿ ತಿಳಿಸಿದೆ.
ನ.26 ರಂದು (ಶನಿವಾರ) ಬ್ರೆಂಡಾ ವಿಲ್ಸನ್ ಅವರೊಂದಿಗೆ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ಗಂಟೆಗಳಾದ ಮೇಲೆ ಅಂದರೆ ರಾತ್ರಿ ನಿದ್ದೆಯಲ್ಲಿರುವಾಗ ಜೇಕ್ ಫ್ಲಿಂಟ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಜೇಕ್ ಫ್ಲಿಂಟ್ ನಿಧನರಾಗಿರುವ ಸುದ್ದಿಯನ್ನು ಗಾಯಕನ ಮಾಜಿ ಮ್ಯಾನೇಜರ್ ಆಗಿರುವ ಬ್ರೆಂಡಾ ಕ್ಲೈನ್ ಅವರು, ಫೇಸ್ ಬುಕ್ ನಲ್ಲಿ ಬರೆದುಕೊಂಡು ದುಃಖ ವ್ಯಕ್ತಪಡಿಸಿ, ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೇಕ್ ಫ್ಲಿಂಟ್ ಅವರು ಮೊದಲ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ತೆಗೆದುಕೊಂಡ ಫೋಟೋವನ್ನು ಹಂಚಿಕೊಂಡು, ಇಲ್ಲಿಂದ ನಮ್ಮ ಅದ್ಭುತ ಸ್ನೇಹ ಆರಂಭವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಜೇಕ್ ಫ್ಲಿಂಟ್ ಅವರ ಪತ್ನಿ ಬ್ರೆಂಡಾ ವಿಲ್ಸನ್, ಜೇಕ್ ಅವರ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಸಹಿಸುವ ಶಕ್ತಿ ಭಗವಂತ ಭರಿಸಲಿ ಎಂದು ಬ್ರೆಂಡಾ ಕ್ಲೈನ್ ಬರೆದುಕೊಂಡಿದ್ದಾರೆ.
Related Articles
ಪತ್ನಿ ಬ್ರೆಂಡಾ ವಿಲ್ಸನ್ ಅವರೊಂದಿಗೆ ಇದೇ ವರ್ಷದ ಜನವರಿಯಲ್ಲಿ ಜೇಕ್ ಫ್ಲಿಂಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಭಿಮಾನಿಗಳಿಗೆ ತನ್ನ ಭಾವಿ ಪತ್ನಿಯೊಂದಿಗೆ ಫೋಟೋ ಹಂಚಿಕೊಂಡು ವಿಷಯವನ್ನು ಜೇಕ್ ತಿಳಿಸಿದ್ದರು.
ನಾವು ಮದುವೆಯ ಫೋಟೋಗಳನ್ನು ತೆಗೆಯುತ್ತಿರಬೇಕಿತ್ತು. ಆದರೆ ನನ್ನ ಗಂಡನನ್ನು ಸಮಾಧಿ ಮಾಡಲು ನನ್ನೆಲ್ಲಾ ಮದುವೆ ಸಂಭ್ರಮದ ಕಳೆಯನ್ನು ಕೆಳಗಿಡುವ ಸ್ಥಿತಿ ಬಂದಿದೆ. ಇಷ್ಟು ನೋವು ಅನುಭವಿಸಬೇಕಾ? ನನ್ನ ಹೃದಯ ಕಳೆದು ಹೋಗಿದೆ. ನನಗೆ ನನ್ನ ಗಂಡಬೇಕು. ನನಗೆ ಬೇರೇನೂ ಬೇಡ. ಅವನಿಲ್ಲಿರಬೇಕೆಂದು ಎಂದು ನೋವಿನಿಂದ ವಿಧಿಗೆ ಪ್ರಶ್ನಿಸಿ ಬರೆದುಕೊಂಡಿದ್ದಾರೆ.
ಕಂಟ್ರಿ ಮ್ಯೂಸಿಕ್ ನಲ್ಲಿ ( ದಕ್ಷಿಣ ಅಮೆರಿಕಾದ ಪ್ರಾಂತೀಯ ಸಂಗೀತ ಪ್ರಕಾರ) ಹೆಚ್ಚು ಪರಿಚಿತರಾಗಿದ್ದ ಜೇಕ್ ಫ್ಲಿಂಟ್ ʼವಾಟ್ಸ್ ಯುವರ್ ನೇಮ್ʼ, ʼಲಾಂಗ್ ರೋಡ್ʼ, ʼಬ್ಯಾಕ್ ಟು ಹೋಮ್ʼ, ʼಕೌಟೌನ್ʼ, ಮತ್ತು ಫೈರ್‌ಲೈನ್ ಹಾಡುಗಳಿಂದ ಜನಪ್ರಿಯರಾಗಿದ್ದರು.