Advertisement

ಸನಾತನ ಧರ್ಮ ಮಾರ್ಗದಿಂದ ರಾಷ್ಟ್ರ ರಕ್ಷಣೆ

04:45 PM May 02, 2019 | Team Udayavani |

ಸಿದ್ದಾಪುರ: ಶಂಕರಾಚಾರ್ಯರು ಜಗದ್ಗುರುಗಳು. ಅವರೇ ಆದಿ ಗುರುಗಳು ಮಾತ್ರ. ಶಂಕರರು ಇಲ್ಲದಿದ್ದರೆ ಸನಾತನ ಧರ್ಮ, ಶೃದ್ಧೆ ಉಳಿಯುತ್ತಿರಲಿಲ್ಲ. ಜನಸಮೂಹದಲ್ಲಿ ಪರಸ್ಪರಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತಿತ್ತು. ದೇಶ ಉಳಿಯಲು ಅವರು ಸನಾತನ ಧರ್ಮ ಮಾರ್ಗದ ಬೋಧನೆ ಮಾಡಿರುವುದೇ ಕಾರಣ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಬುಧವಾರ ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಚಂದ್ರಮೌಳೀಶ್ವರ ದೇವರ ಪ್ರತಿಷ್ಠಾಪನೆ, ಲಕ್ಷ್ಮೀನೃಸಿಂಹ ದೇವರ ವಿಶೇಷ ಪೂಜೆ, ರುದ್ರಹವನದ ಪೂರ್ಣಹುತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನೂತನವಾಗಿ ನಿರ್ಮಿಸಲಾದ ಶಂಕರ ಕೃಪಾ ಭವನದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಜ್ಞಾನ ಮಾರ್ಗ ಮತ್ತು ಕಾಮಮಾರ್ಗ ಎರಡೂ ಪ್ರತಿಯೊಬ್ಬರೂ ಅನುಸರಿಸಬೇಕಾದ ಮಾರ್ಗಗಳು. ಒಳ್ಳೆಯ ರೀತಿಯಲ್ಲಿ ನಡೆದು, ಉತ್ತಮ ಕೆಲಸ ಮಾಡಿ ನಂತರ ಜ್ಞಾನ ಮಾರ್ಗದಲ್ಲಿ ಗುರುವಿನ ಆಶ್ರಯ, ಅನುಗ್ರಹ ಪಡೆಯಬೇಕು. ಎಷ್ಟೇ ಜ್ಞಾನ ಸಂಪಾದಿಸಿದರೂ ಪೂರ್ಣ ಅಂಧಕಾರ ಹೋಗಲು ಗುರುವಿನ ಅನುಗ್ರಹ ಬೇಕು. ಧರ್ಮಮಾರ್ಗ ಬಿಟ್ಟು ಬೇರೆಡೆ ಹೋದರೆ ತಾನೇ ಶೀಕ್ಷೆ ನೀಡುತ್ತೇನೆ ಎಂದು ದೇವರು ಹೇಳಿದ್ದಾನೆ. ಇದಕ್ಕೆ ಸನ್ಯಾಸಿಗಳೂ ಅತೀತರಲ್ಲ.

ವ್ರತ ಸ್ವೀಕಾರ ಮಾಡಿದವರು ಸನ್ಯಾಸದ ಕಟ್ಟುಪಾಡು, ಅನುಷ್ಠಾನಕ್ಕೆ ಬದ್ಧರಾಗಿರಬೇಕು. ಜನಸಾಮಾನ್ಯರು ತಪ್ಪು ಮಾಡಿದರೆ ಯಮಧರ್ಮ ಶಿಕ್ಷೆ ಕೊಡುತ್ತಾನೆ. ಯತಿಗಳು ತಪ್ಪು ಮಾಡಿದರೆ ಇಂದ್ರ ಶಿಕ್ಷಿಸುತ್ತಾನೆ ಎಂದರು. ಶೃಂಗೇರಿ ಮತ್ತು ನೆಲೆಮಾವು ಮಠಗಳ ನಡುವೆ ಒಳ್ಳೆಯ ಸಂಬಂಧವಿದೆ. ಹಿಂದಿನ ಗುರುಗಳು ಈ ಮಠದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಸುಂದರವಾದ ಪರಿಸರದಲ್ಲಿ ಶ್ರೀ ಮಠವಿದ್ದು ಶಂಕರ ಕೃಪಾ ಕಟ್ಟಡ ಚೆನ್ನಾಗಿ ನಿರ್ಮಾಣವಾಗಿದೆ. ಶೀಘ್ರವಾಗಿ ಈ ಮಠಕ್ಕೆ ಪೀಠಾಧಿಧೀಶರು ಬರುವವರಿದ್ದು ಆ ನಂತರ ಇನ್ನೂ ಉತ್ತಮ ರೀತಿಯಲ್ಲಿ ಮುಂದುವರಿಯುತ್ತದೆ ಎಂದರು.

ಶೃಂಗೇರಿ ಪೀಠದ ಆಢಳಿತಾಧಿಕಾರಿ ವಿ.ಆರ್‌. ಗೌರಿಶಂಕರ ಉಪಸ್ಥಿತರಿದ್ದರು. ವಿನಾಯಕ ಭಟ್ಟ ಮಾಳಿಗೆಮನೆ ಪ್ರವಚನ ನೀಡಿದರು. ಆಡಳಿತ ಸಮಿತಿ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ಗನೂರು ಸ್ವಾಗತಿಸಿದರು. ಡಾ| ಜಿ.ಎನ್‌. ಭಟ್ಟ ಹರಿಗಾರ ಪ್ರಾಸ್ತಾವಿಕ ಮಾತನಾಡಿದರು. ಜಿ.ಆರ್‌. ಭಾಗ್ವತ ನಿರೂಪಿಸಿದರು.

Advertisement

ಶ್ರೀಗಳ ಸ್ವಾಗತ: ಶ್ರೀಮನ್ನೆಲೆಮಾವು ಮಠಕ್ಕೆ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಧೂಳಿ ಪೂಜೆ, ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು. ಸೀಮೆಯ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next