ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವವನ್ನು ಅದ್ದೂರಿಯ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆಗಳು ಭರದಿಂದ ನಡೆದಿದ್ದು, ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣವನ್ನು ಮದುವಣಗಿತ್ತಿಯಂತೆ ಸಜ್ಜುಗೊಳಿಸಲಾಗುತ್ತಿದೆ.
ಕಳೆದ ನಾಲ್ಕೈದು ದಿನಗಳಿಂದ ಮಳೆ ಕಾಡುತ್ತಿದ್ದರೂ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಸುಸಜ್ಜಿತ ವೇದಿಕೆ ಹಾಗೂ ಪ್ರೇಕ್ಷಕರು ಕುಳಿತುಕೊಳ್ಳುವ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗುತ್ತಿದೆ. ಕೋರೆ ಅವರ ಅಮೃತ ಮಹೋತ್ಸವ ಬಹಳ ಅರ್ಥಪೂರ್ಣವಾಗಿರಬೇಕು. ಇತಿಹಾಸದಲ್ಲಿ ದಾಖಲಾಗಬೇಕು ಎಂಬ ಉದ್ದೇಶದಿಂದ ಇಡೀ ಕೆಎಲ್‌ಇ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿಗಳು ಟೊಂಕಕಟ್ಟಿ ನಿಂತಿದ್ದು ಇದಕ್ಕೆ ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರು ಪಕ್ಷಾತೀತವಾಗಿ ಬೆಂಬಲವಾಗಿ ನಿಂತಿರುವುದು ವಿಶೇಷ.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅ. 15ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಈ ಅಮೃತ ಮಹೋತ್ಸವ ಸಮಾರಂಭಕ್ಕೆ ಕರ್ನಾಟಕವಲ್ಲದೆ ನೆರೆಯ ಗೋವಾ ಮತ್ತು ಮಹಾರಾಷ್ಟ್ರದ ಸುಮಾರು ಒಂದು ಲಕ್ಷ ಜನರು ಸಾಕ್ಷಿಯಾಗಲಿದ್ದಾರೆ.
ಗಣ್ಯರು ಭಾಗಿ: ಮುಖ್ಯ ಅತಿಥಿಯಾಗಿ ಕೇಂದ್ರ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ, ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ ಸಾವಂತ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪ, ಜಗದೀಶ ಶೆಟ್ಟರ್, ಆರ್.ವಿ. ದೇಶಪಾಂಡೆ, ಮಹಾರಾಷ್ಟ್ರದ ಸಚಿವ ರಾಧಾಕೃಷ್ಣ ಪಾಟೀಲ, ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಆಗಮಿಸಲಿದ್ದಾರೆ.
ಊಟ-ಪಾರ್ಕಿಂಗ್ ವ್ಯವಸ್ಥೆ: ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಜನರಿಗಾಗಿ ಭೂತರಾಮನಹಟ್ಟಿಯ ಮುಕ್ತಿಮಠ, ಕಣಬರ್ಗಿಯ ಸಂಕಲ್ಪ ಗಾರ್ಡನ್, ನಿಲಜಿ, ಧರ್ಮನಾಥ ಭವನ, ನಾಗನೂರು ರುದ್ರಾಕ್ಷಿಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಾಂತೇಶ ನಗರ, ಬಾಕ್ಸೈಟ್ ರಸ್ತೆ, ಶ್ರೀನಗರ ಹಾಗೂ ಐಸಿಎಂಆರ್ ಆವರಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವರ್ಷವಿಡೀ ಕಾರ್ಯಕ್ರಮ: ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಅವಿಸ್ಮರಣೀಯವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ವಿಶಿಷ್ಟವಾಗಿ ಕಾರ್ಯಕ್ರಮ ಆಯೋಜಿಸಿರುವ ಕೆಎಲ್‌ಇ ಸಂಸ್ಥೆಯು ಇದಕ್ಕೆ ಪೂರಕವಾಗಿ ವರ್ಷವಿಡೀ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದಿನ ತಿಂಗಳು ನವಂಬರ್ ದಲ್ಲಿ ಬೆಳಗಾವಿಯಲ್ಲಿ ಮಠಾಧೀಶರ ಸಮಾವೇಶ ಆಯೋಜಿಸಿದೆ. 2023ರ ಜನವರಿಯಲ್ಲಿ ಚಿದಾನಂದ ಪ್ರಭು ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕೃಷಿ ಮೇಳ ನಡೆಸಲಾಗುವುದು ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.