ಶ್ರೀಹರಿಕೋಟಾ: ಇಸ್ರೋದ ಪಥದರ್ಶಕ(ನೇವಿಗೇಶನ್) ಉಪಗ್ರಹ ಎನ್‌ವಿಎಸ್-01ಉಡಾವಣೆ ಸೋಮವಾರ ಬೆಳಗ್ಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಿಂದ ಕ್ಷಣಗಣನೆ ಆರಂಭವಾಗಿದೆ.
ತಮಿಳುನಾಡಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೇ 29ರಂದು ಬೆಳಗ್ಗೆ 10.42ಕ್ಕೆ ಸರಿಯಾಗಿ ಜಿಎಸ್‌ಎಲ್‌ವಿ ಮೂಲಕ ಎನ್‌ವಿಎಸ್-01 ಉಡಾವಣೆಯಾಗಲಿದೆ. ಈ ಉಪಗ್ರಹವು 2,232 ಕೆಜಿ ತೂಕವಿದೆ. ಇದು ಎರಡನೇ ಪೀಳಿಗೆಯ ಪಥದರ್ಶಕ ಉಪಗ್ರಹವಾಗಿದೆ. ಜಿಎಸ್‌ಎಲ್‌ವಿ ಉಪಗ್ರಹ ವಾಹಕದ ಎತ್ತರ 51.2 ಮೀಟರ್ ಇದೆ. ಈ ಉಪಗ್ರಹವು ಎಲ್1, ಎಲ್5 ಎಂಬ ಪಥದರ್ಶಕ ಪೇಲೋಡ್‌ಗಳನ್ನು ಮತ್ತು ಎಸ್ ಬ್ಯಾಂಡ್‌ಗಳನ್ನು ಕೊಂಡೊಯ್ಯಲಿದೆ. ಉಡಾವಣೆಯಾದ 20 ನಿಮಿಷಗಳ ನಂತರ ಸುಮಾರು 251 ಕಿ.ಮೀ. ಎತ್ತರದಲ್ಲಿ ಜಿಯೊಸಿಂಕ್ರೊನಸ್ ವರ್ಗಾವಣೆ ಕಕ್ಷೆ(ಜಿಟಿಒ)ಗೆ ಉಪಗ್ರಹವನ್ನು ಜಿಎಸ್‌ಎಲ್‌ವಿ ಸೇರಿಸಲಿದೆ ಎಂದು ಇಸ್ರೋ ತಿಳಿಸಿದೆ.