ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿ, ಮೂರೂ ಪಕ್ಷಗಳಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು “ಪಕ್ಷಾಂತರ ಪರ್ವ’ ಆರಂಭಿಸಿದ್ದಾರೆ. ಆಯಾ ಪಕ್ಷಗಳಿಂದ ಟೆಕೆಟ್ ಸಿಗದೆ ವಂಚಿತರಾದ, ನಾಯಕರ ನಿರ್ಲಕ್ಷ್ಯ ಧೋರಣೆಯಿಂದ ಮನನೊಂದ ಹಲವು ನಾಯಕರು ಅನ್ಯ ಪಕ್ಷಗಳ ಪಡಸಾಲೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ.
ಬಿಜೆಪಿ ಮುಖಂಡ ಮಂಜುನಾಥ ಕುನ್ನೂರ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು: ಮುಖ್ಯಮಂತ್ರಿ ಆಪ್ತ ಹಾಗೂ ಅವರ ತವರು ಕ್ಷೇತ್ರದ ಬಿಜೆಪಿ ನಾಯಕ ಮಂಜುನಾಥ್ ಕುನ್ನೂರ ಸೋಮವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ ನಾಯಕರ ಸಮ್ಮುಖದಲ್ಲಿ ಮಂಜುನಾಥ ಕುನ್ನೂರ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , “ಮುಖ್ಯಮಂತ್ರಿ ಕ್ಷೇತ್ರದಲ್ಲಿ ಇದೊಂದು ಮಹತ್ವದ ತಿರುವು. ಬಿಜೆಪಿ ನಾಯಕರೇ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ’ ಎಂದು ಹೇಳಿದರು.
ಮುಖ್ಯಮಂತ್ರಿಗಳು ತಮ್ಮ ಆಪ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವಾಗ, ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವೇ? ಬಿಜೆಪಿಯ ಶೋಚನೀಯ ಸ್ಥಿತಿಗೆ ಇದು ಸಾಕ್ಷಿಯಾಗಿದೆ. ಮೂರು ಬಾರಿ ಶಾಸಕರು ಮತ್ತು ಒಮ್ಮೆ ಸಂಸದರೂ ಆಗಿದ್ದ ಕುನ್ನೂರ, ಬೊಮ್ಮಾಯಿ ಅವರ ಗೆಲುವಿಗೆ ಶ್ರಮಿಸಿದ್ದರು. ಅವರ ಕಾಂಗ್ರೆಸ್ ಸೇರ್ಪಡೆಯಿಂದ “ಕೈ’ಗೆ ಬಲ ಬಂದಿದೆ ಎಂದರು.
Related Articles
ಇದೇ ವೇಳೆ ಕೆ.ಆರ್. ಪೇಟೆಯ ಜೆಡಿಎಸ್ ನಾಯಕ ದೇವರಾಜ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು , ಮಂಡ್ಯ ಜಿಲ್ಲೆಯ ರಾಜಕೀಯ ಇಂದು ಹೊಸ ತಿರುವು ಪಡೆಯುತ್ತಿದೆ. ಬಹಳಷ್ಟು ನಾಯಕರು ಜೆಡಿಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ದೇವರಾಜ್ ಅವರು ಈಗ ಕಾಂಗ್ರೆಸ್ ಸೇರುತ್ತಿದ್ದಾರೆ. ಅದೇ ರೀತಿ, ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ವಾಸು ಕೂಡ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಆಗಮಿಸಿದ್ದಾರೆ. ಅವರನ್ನು ಮತ್ತೊಂದು ದಿನ ಕಾರ್ಯಕ್ರಮ ಮಾಡಿ, ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿಂತಾಮಣಿಯ ಹಲವು ಮುಖಂಡರು ಮತ್ತು ಬೆಂಬಲಿಗರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2ಎ ಮೀಸಲಾತಿಗಾಗಿ ಹೋರಾಟ ಮಾಡಿದ್ದೆವು. ಆದರೆ, ಅದನ್ನು ಮುಸ್ಲಿಂರಿಂದ ಕಸಿದು ನಮಗೆ ನೀಡಲು ಹೊರಟಿದ್ದಾರೆ. ಈ ಕಾರಣಕ್ಕಾಗಿ ಬಿಜೆಪಿ ತೊರೆದಿದ್ದೇನೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಉತ್ತಮರು ಹಾಗೂ ಕಾಂಗ್ರೆಸ್ ಮುಕ್ತ ರಾಷ್ಟ್ರ ನಿರ್ಮಾಣ ಅಂತಾರೆ. ಆದರೆ, ಅವರಿಬ್ಬರೂ ದುಷ್ಟರು. ಬಿಜೆಪಿ ನಿರ್ನಾಮ ಮಾಡುತ್ತೇವೆ.
-ಮಂಜುನಾಥ್ ಕುನ್ನೂರ
30 ರಂದು ಗುಬ್ಬಿ ಶ್ರೀನಿವಾಸ್ ಕೈ ತೆಕ್ಕೆಗೆ
ಬೆಂಗಳೂರು: ಗುಬ್ಬಿ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಎಸ್.ಆರ್.ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ. ಸೋಮವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮಾ.30 ರಂದು ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ರಾಜೀನಾಮೆ ಬಳಿಕ ಮಾತನಾಡಿದ ಅವರು, ಅನಿವಾರ್ಯವಾಗಿ ಜೆಡಿಎಸ್ ತೊರೆಯಬೇಕಾಗಿದೆ. ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಸಹೋದರರಂತೆ ಇದ್ದೆವು. ಆದರೆ, ಕೆಲವರ ಮಾತು ಹೇಳಿ ನನ್ನನ್ನು ಪಕ್ಷದಿಂದ ಹೊರ ಹಾಕಿದರು ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯಸಭೆ ಚುನಾವಣೆ ವೇಳೆ ನಾನು ಪಕ್ಷ ದ್ರೋಹ ಮಾಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಸ್ಪರ್ಧೆ ಮಾಡಿದಾಗಲೂ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಆದರೂ ನನ್ನನ್ನು ಅವಮಾನಿಸಲಾಯಿತು. 2021 ರಲ್ಲೇ ನನ್ನ ಕ್ಷೇತ್ರಕ್ಕೆ ಬದಲಿ ಅಭ್ಯರ್ಥಿ ಘೋಷಿಸಲಾಯಿತು. ಹೀಗಾಗಿ, ನಾನು ಬೇರೆ ದಾರಿ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಹೇಮಚಂದ್ರ ಸಾಗರ್ ಬಿಜೆಪಿಗೆ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಸೋಮವಾರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಹೇಮಚಂದ್ರ ಸಾಗರ್ ಅವರು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ಹಲವು ಮುಖಂಡರು ಉಪಸ್ಥಿತರಿದ್ದರು.