Advertisement

ನಾಳೆ ಲೋಕಸಭಾ ಕ್ಷೇತ್ರಗಳ ಮತ ಎಣಿಕೆ

02:44 PM May 22, 2019 | Suhan S |

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 3.50 ಕೋಟಿ ಮತದಾರರು ಬರೆದ 461 ಅಭ್ಯರ್ಥಿಗಳ ಹಣೆಬರಹ ಗುರುವಾರ ಬಹಿರಂಗವಾಗಲಿದೆ. ಮತ ಎಣಿಕೆಗೆ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದರಂತೆ ರಾಜ್ಯಾದ್ಯಂತ 28 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೇ 23ರ ಬೆಳಗ್ಗೆ 8 ಗಂಟೆಯಿಂದ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

Advertisement

ಮತ ಎಣಿಕೆ ಸಿದ್ಧತೆಗಳ ಕುರಿತು ಮಾಹಿತಿ ನೀಡಲು ಮಂಗಳವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಈ ಬಗ್ಗೆ ಮಾಹಿತಿ ನೀಡಿದರು. ಅವರು ಹೇಳಿದ್ದಿಷ್ಟು:

ಎಲ್ಲ 28 ಲೋಕಸಭಾ ಕ್ಷೇತ್ರಗಳ 58,186 ಮತಗಟ್ಟೆಗಳ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 14 ಟೇಬಲ್ಗಳಂತೆ 3,224 ಮತ ಎಣಿಕೆ ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ವಿವಿಪ್ಯಾಟ್ ಮುದ್ರಿತ ಚೀಟಿಗಳ ತಾಳೆ ಸುತ್ತು ಸೇರಿ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 18ರಿಂದ ಗರಿಷ್ಠ 33 ಸುತ್ತುಗಳಂತೆ ಒಟ್ಟು 4,215 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಸುತ್ತು ಪೂರ್ಣಗೊಳಿಸಲು ಕನಿಷ್ಠ 15ರಿಂದ 20 ನಿಮಿಷ ಆಗುತ್ತದೆ. ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭಗೊಳ್ಳಲಿದ್ದು, ಮೊದಲಿಗೆ ಪೋಸ್ಟಲ್ ಬ್ಯಾಲೆಟ್ ಹಾಗೂ ಸೇವಾ ಮತದಾರರ ಇಟಿಪಿಬಿಎಸ್‌ ಮತಗಳ ಎಣಿಕೆ ನಡೆಯಲಿದೆ. 25,768 ಇಟಿಪಿಬಿಎಸ್‌ ಮತಗಳು ಸೇರಿ ಒಟ್ಟು 98,606 ಪೋಸ್ಟಲ್ ಬ್ಯಾಲೆಟ್‌ಗಳು ಇಲ್ಲಿವರೆಗೆ ಸ್ವೀಕೃತವಾಗಿವೆ.

ಮತ ಎಣಿಕೆ ಕಾರ್ಯಕ್ಕಾಗಿ 28 ಕ್ಷೇತ್ರಗಳಲ್ಲಿ 28: ಚುನಾವಣಾಧಿಕಾರಿಗಳು, 258 ಸಹಾಯಕ ಚುನಾವಣಾಧಿಕಾರಿಗಳು, 180 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು, 80 ವೀಕ್ಷಕರನ್ನು ನಿಯೋಜಿಸಲಾಗಿದೆ. ಇದಲ್ಲದೇ 3,682 ಮೇಲುಸ್ತುವಾರಿ, 3,707 ಸಹಾಯಕರು, 3,738 ಸೂಕ್ಷ್ಮವೀಕ್ಷಕರು ಕಾರ್ಯ ನಿರ್ವಹಿ ಸಲಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಮತ ಎಣಿಕೆ ಕೇಂದ್ರದೊಳಗೆ ಮತ ಎಣಿಕೆಯ ಮೇಲುಸ್ತುವಾರಿ, ಎಣಿಕೆಯ ಸಹಾಯಕರು ಮತ್ತು ಸೂಕ್ಷ್ಮ ವೀಕ್ಷಕರು ಮತ್ತು ಚುನಾವಣಾ ಆಯೋಗದಿಂದ ಮಾನ್ಯತೆ ಪತ್ರ ಪಡೆದುಕೊಂಡ ಸಿಬ್ಬಂದಿ, ಅಭ್ಯರ್ಥಿಗಳು, ಅವರ ಏಜೆಂಟರುಗಳ ಪ್ರವೇಶಕ್ಕೆ ಅವಕಾಶ ಇದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷಿದ್ಧ.

Advertisement

ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾಲ್ಕು ಹಂತದಲ್ಲಿ ಭದ್ರತೆ ಮಾಡಲಾಗಿದೆ. ಕೇಂದ್ರ ಕ್ಷಿಪ್ರ ಕಾರ್ಯ ಪಡೆ, ಶಸ್ತ್ರಾಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸ್‌, ಕೆಎಸ್‌ಆರ್‌ಪಿ ಪೊಲೀಸರನ್ನು ವಿವಿಧ ಹಂತದಲ್ಲಿ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಮತ ಎಣಿಕೆ ಕೇಂದ್ರದಿಂದ 50 ಮೀಟರ್‌ನಿಂದ 100 ಮೀಟರ್‌ ದೂರದವರೆಗೆ ನಿಷೇಧ ಇದೆ. ಫ‌ಲಿತಾಂಶ ವೀಕ್ಷಣೆಗಾಗಿ ಎಲ್ಇಡಿ ವ್ಯವಸ್ಥೆ ಮಾಡಲಾಗಿರುತ್ತದೆ.

ವಿವಿಪ್ಯಾಟ್ ಚೀಟಿಗಳ ಎಣಿಕೆ:

ಅಧಿಕೃತ ಮತದಾನ ಆರಂಭಗೊಳ್ಳುವ ಮೊದಲು ಎಲ್ಲ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿ ಮತ್ತು ಏಜೆಂಟರುಗಳ ಸಮ್ಮುಖದಲ್ಲಿ ಅಣಕು ಮತದಾನ ಮಾಡಲಾಗುತ್ತದೆ. ಅದರಂತೆ 50 ಮತಗಳನ್ನು ಚಲಾಯಿಸಿ ಅದನ್ನು ಆ ದತ್ತಾಂಶವನ್ನು ಇವಿಎಂ ಕಂಟ್ರೋಲ್ ಯೂನಿಟ್ನಿಂದ ಅಳಸಿ ಹಾಕಲಾಗುತ್ತದೆ ಮತ್ತು ವಿವಿಪ್ಯಾಟ್‌ನಲ್ಲಿ ಮುದ್ರಿತ ಚೀಟಿಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ, ರಾಜ್ಯದ ವಿವಿಧ 16 ಲೋಕಸಭಾ ಕ್ಷೇತ್ರಗಳಲ್ಲಿ ಅಣಕು ಮತದಾನದ ಬಳಿಕ ಕಂಟ್ರೋಲ್ ಯೂನಿಟ್‌ನ ದತ್ತಾಂಶವನ್ನು ಅಳಿಸಿ ಹಾಕದ 31 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಗಳಲ್ಲಿ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆಗೆ ಪರಿಗಣಿಸಲಾಗುವುದು. ಅದೇ ರೀತಿ, ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ 104ರಲ್ಲಿ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ.
ಉಪ ಚುನಾವಣೆ ಮತ ಎಣಿಕೆ:

ರಾಜ್ಯದ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮೇ 23ರಂದು ನಡೆಯಲಿದ್ದು, ಈ ಕಾರ್ಯಕ್ಕಾಗಿ ಇಬ್ಬರು ಚುನಾವಣಾಧಿಕಾರಿ, ಇಬ್ಬರು ಸಹಾಯಕ ಚುನಾವಣಾಧಿಕಾರಿಗಳು ನಿಯೋಜನೆಗೊಂಡಿದ್ದಾರೆ. 25 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 455 ಮತ ಎಣಿಕೆ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. 30 ಟೇಬಲ್ನಲ್ಲಿ 16 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ತಲಾ 34 ಮಂದಿ ಮತ ಎಣಿಕೆಯ ಮೇಲುಸ್ತುವಾರಿ, ಸಹಾಯಕರು, ಸೂಕ್ಷ್ಮ ವೀಕ್ಷಕರು ಮತ ಎಣಿಕೆಯ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ಫ‌ಲಿತಾಂಶ ನಾಲ್ಕು ತಾಸು ವಿಳಂಬ:

ಸಾಮಾನ್ಯವಾಗಿ ಪೋಸ್ಟಲ್ ಬ್ಯಾಲೆಟ್ ಎಣಿಕೆ ನಂತರ ಇವಿಎಂ ಮತಗಳ ಎಣಿಕೆ ಆರಂಭಿಸಿ ಮಧ್ಯಾಹ್ನ 12ರ ವೇಳೆಗೆ ಮೊದಲ ಫ‌ಲಿತಾಂಶ ಹೊರ ಬೀಳುತ್ತಿತ್ತು. ಆದರೆ, ಈ ಬಾರಿ ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಮುದ್ರಿತ ಚೀಟಿಗಳ ಎಣಿಕೆ ಮಾಡಿ ಇವಿಎಂ ಮತಗಳಿಗೆ ತಾಳೆ ಹಾಕಬೇಕಾಗಿದೆ. ವಿವಿಪ್ಯಾಟ್ ಎಣಿಕೆಯ ಒಂದು ಸುತ್ತು ಮುಗಿಸಲು ಕನಿಷ್ಠ 45 ನಿಮಿಷ ಬೇಕು. ಪ್ರತಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ತಲಾ 5 ರಂತೆ 40 ಮತಗಟ್ಟೆಗಳ ವಿವಿಪ್ಯಾಟ್ ತಾಳೆ ಹಾಕಲು ಕನಿಷ್ಠ 3ರಿಂದ 4 ತಾಸು ಬೇಕು. ಹಾಗಾಗಿ, ಆಯಾ ಸುತ್ತುವಾರು ಮಾಹಿತಿ ಆಗಿಂದಾಗೆ ಸಿಗುತ್ತದೆ. ಆದರೆ, ಅಂತಿಮ ಫ‌ಲಿತಾಂಶ ಹೊರಬೀಳಲು 3ರಿಂದ 4 ತಾಸು ವಿಳಂಬವಾಗುತ್ತದೆ. ಅದರಂತೆ ಮೊದಲ ಫ‌ಲಿತಾಂಶ ಮಧ್ಯಾಹ್ನ 3ಕ್ಕೆ ಹೊರಬೀಳುವ ನಿರೀಕ್ಷೆಯಿದ್ದು, ಅದಾದ ಬಳಿಕ ಸಂಜೆ 6ರೊಳಗೆ ಎಲ್ಲ ಫ‌ಲಿತಾಂಶಗಳು ಸಿಗಲಿವೆ.
Advertisement

Udayavani is now on Telegram. Click here to join our channel and stay updated with the latest news.

Next