ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಒಂದು ಸ್ಥಾನಕ್ಕೆ ರಾಜ್ಯ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ, ಬಿಜೆಪಿ ಹೈಕಮಾಂಡ್ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದ್ದು ಸವದಿ ಅವರು ಫೆ.6 ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಶಿವಾಜಿನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದರಿಂದ ಖಾಲಿಯಾಗಿರುವ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ರಾಣೆಬೆನ್ನೂರಿನ ಅನರ್ಹ ಶಾಸಕ ಆರ್.ಶಂಕರ್ ಅವರು ಸಿಎಂ ಯಡಿಯೂರಪ್ಪ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.
ಇದರ ನಡುವೆ ಎರಡೂ ಮನೆಯ ಸದಸ್ಯರಲ್ಲದಿರುವ ಲಕ್ಷ್ಮಣ ಸವದಿ ಅವರು ಸಚಿವರಾಗಿ ಫೆ.20ಕ್ಕೆ ಆರು ತಿಂಗಳು ಮುಕ್ತಾಯವಾಗುವುದರಿಂದ ಅಷ್ಟರೊಳಗೆ ಯಾವುದಾದರೂ ಒಂದು ಮನೆಯ ಸದಸ್ಯರಾಗುವುದು ಅನಿವಾರ್ಯ. ಈಗಿರುವ ಮಾಹಿತಿ ಪ್ರಕಾರ ಲಕ್ಷ್ಮಣ ಸವದಿ ಅವರನ್ನು ವಿಧಾನ ಪರಿಷತ್ತಿನ ಖಾಲಿ ಇರುವ ಒಂದು ಸ್ಥಾನಕ್ಕೆ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು, ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ಸೂಚನೆ ಮೇರೆಗೆ ಫೆ.6 ರಂದು ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಸಂಖ್ಯಾ ಬಲದ ಕೊರತೆಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರಲು ನಿರ್ಧರಿಸಿರುವುದರಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಪಕ್ಷದ ತೀರ್ಮಾನಕ್ಕೆ ಬದ್ಧ: ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು ನನಗೆ ಇನ್ನೂ ಪಕ್ಷದಿಂದ ಯಾವುದೇ ಸೂಚನೆ ಬಂದಿಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ನಾನೊಬ್ಬ ರಾಜಕಾರಣಿ, ಸನ್ಯಾಸಿಯಲ್ಲ.
ನನಗೂ ರಾಜಕೀಯ ಅಪೇಕ್ಷೆಗಳಿವೆ. ಇದರ ಬಗ್ಗೆ ನಿರ್ಧರಿಸಲು ಮುಖ್ಯಮಂತ್ರಿ ಗಳಿದ್ದಾರೆ. ಪಕ್ಷದ ತೀರ್ಮಾನವೇ ಅಂತಿಮ ಎಂದರು. ಕೆಲವರು ತ್ಯಾಗ ಮಾಡುವುದಾಗಿ ಹೇಳಿದ್ದಾರೆ. ಅದು ಅವರವರ ವೈಯಕ್ತಿಕ ನಿರ್ಧಾರ, ಯಾರನ್ನು ಮಂತ್ರಿ ಮಾಡಬೇಕು, ಬಿಡಬೇಕು ಎಂಬುದು ಪಕ್ಷಕ್ಕೆ ಬಿಟ್ಟಿದ್ದು ಎಂದು ಹೇಳಿದರು.