Advertisement

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

12:15 AM Dec 01, 2021 | Team Udayavani |

ಬೆಂಗಳೂರು: ವಿಧಾನಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸದ ಕಡೆ ಬೆಂಬಲ ಕೊಡುವ ವಿಚಾರದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಬಿ.ಎಸ್‌.ಯಡಿಯೂರಪ್ಪ ಆಶಯಕ್ಕೆ ಪೂರಕವಾಗಿ ಮಾತನಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟಿದ್ದಾರೆ.

Advertisement

ಜೆಡಿಎಸ್‌ ನಾಯಕರನ್ನು ಸೆಳೆಯುತ್ತಿರುವ ಕಾಂಗ್ರೆಸ್‌ಗೆ ಟಕ್ಕರ್‌ ನೀಡುವುದು ಹಾಗೂ ಭವಿಷ್ಯದಲ್ಲಿ ಮೈತ್ರಿ ಅನಿವಾರ್ಯ ಕೈ ಜೋಡಿ ಸಲು ಸಿದ್ಧ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸುವುದು ಎಚ್‌ಡಿಕೆ ಲೆಕ್ಕಾಚಾರ.

ಆದರೆ, ಒಳ ಒಪ್ಪಂದದ ಹಣೆಪಟ್ಟಿ ಕಟ್ಟಿ ದಾಳಿ ಮಾಡುತ್ತಿರುವ ಕಾಂಗ್ರೆಸ್‌ ಕೈಗೆ ನಾವೇ ಅಸ್ತ್ರ ಕೊಟ್ಟಂತಾಗಬಹುದಾ ಎಂಬ ಆತಂಕ ಎಚ್‌.ಡಿ.ದೇವೇಗೌಡರಲ್ಲಿದೆ. ಆದರೆ ಅವರಿಗೆ ಕುಮಾರಸ್ವಾಮಿ ಮನವರಿಕೆ ಮಾಡಿಕೊಟ್ಟು ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಶತ್ರುವಿನ ಶತ್ರು ಮಿತ್ರ’ ಎಂಬಂತೆ ರಾಜಕೀಯವಾಗಿ ಕಾಂಗ್ರೆಸ್‌ಗೆ ಬಿಜೆಪಿ ಶತ್ರು. ಆದರೆ, ಕುಮಾರಸ್ವಾಮಿಗೆ ಕಾಂಗ್ರೆಸ್‌ ತತ್‌ಕ್ಷಣದ ಶತ್ರು. ಮಸ್ಕಿ, ಹಾನಗಲ್‌ ಉಪ ಚುನಾವಣೆ ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ ನಾಯಕರು 2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮದೇ ಅಧಿಕಾರ ಎಂದು ಕನಸು ಕಾಣುತ್ತಿದ್ದು, ಅವರ ಓಟಕ್ಕೆ ಬ್ರೇಕ್‌ ಹಾಕುವುದು ಎಚ್‌ಡಿಕೆ ಗುರಿ. ಅದಕ್ಕಾಗಿ ಪರಿಷತ್‌ ಅಖಾಡವನ್ನು ಬಳಸಿಕೊಳ್ಳುತ್ತಿದ್ದಾರೆ.

ಭವಿಷ್ಯದ ಲೆಕ್ಕಾಚಾರ
ಕುಮಾರಸ್ವಾಮಿ ಅವರು ಯಡಿಯೂರಪ್ಪ ಹಾಗೂ ಬಿಜೆಪಿ ಪರ ಮೃದು ಧೋರಣೆ ತಾಳಿರುವ ಹಿಂದೆ ಭವಿಷ್ಯದ ಲೆಕ್ಕಾಚಾರವೂ ಅಡಗಿದೆ. ಪರಿಷತ್‌ ಚುನಾವಣೆ ನೆಪದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು 2023ರ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಅಗಬಹುದಾದ ರಾಜಕೀಯ ಧ್ರುವೀಕರಣದ ಮುನ್ಸೂಚನೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಇದನ್ನೂ ಓದಿ:ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಪಕ್ಷದ ಹಂತದಲ್ಲಿ ಚರ್ಚೆ ಆಗದೆಯೇ ಜೆಡಿಎಸ್‌ ಬೆಂಬಲ ಪಡೆಯುವ ವಿಚಾರದಲ್ಲಿ ಯಡಿಯೂರಪ್ಪ ಮುಂದಾದುದು ಹಾಗೂ ಅದಕ್ಕೆ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿರುವುದು, ಬೊಮ್ಮಾಯಿ ಕೂಡ ಮೊದಲಿಗೆ ಚರ್ಚೆಯಾಗಿಲ್ಲ ಎಂದು ಹೇಳಿ, ಬಳಿಕ ಜೆಡಿಎಸ್‌ ಬೆಂಬಲ ಪಡೆದರೆ ತಪ್ಪೇನು ಎಂದಿರುವುದು ಬಿಜೆಪಿ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಸೇರಿ ಹಲವರು ಜೆಡಿಎಸ್‌ ಬೆಂಬಲ ಕೋರುವ ಅಗತ್ಯ ಇರಲಿಲ್ಲ. ಇದು ಶರಣಾಗತಿ ಎಂದೂ ಪಕ್ಷದ ನಾಯಕರ ಬಳಿ ಅವಲತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿ ಗಟ್ಟಿಯಾದಷ್ಟೂ ಕಾಂಗ್ರೆಸ್‌ ದುರ್ಬಲವಾಗುತ್ತದೆ ಎಂಬುದು ಬಿಜೆಪಿಯ ಕೆಲವು ನಾಯಕರ ವಾದ.

ಎಚ್‌ಡಿಕೆ ಕಾರಣ
ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆಗಿಳಿಯಲು ನಿರಾಕರಿಸಿ ಬಿಜೆಪಿ ಟಿಕೆಟ್‌ಗಾಗಿ ಶ್ರಮಿಸಿದ್ದ ಸಂದೇಶ್‌ ನಾಗರಾಜ್‌ ಹಾಗೂ ಸಿ.ಆರ್‌. ಮನೋಹರ್‌ ಅವರಿಗೆ ಬಿಜೆಪಿ ಬಾಗಿಲು ಮುಚ್ಚಲು ಎಚ್‌ಡಿಕೆ ತಂತ್ರಗಾರಿಕೆ ಕಾರಣ ಎನ್ನಲಾಗುತ್ತಿದೆ.

ಕಾಂಗ್ರೆಸ್‌ಗೆ ತಿರುಗೇಟು
ಜಿ.ಟಿ.ದೇವೇಗೌಡ, ಗುಬ್ಬಿ ವಾಸು, ಬೆಮೆಲ್‌ ಕಾಂತರಾಜ್ ಸಿ.ಆರ್‌.ಮನೋ ಹರ್‌ ಅವರನ್ನು ಸೆಳೆದಿರುವ ಕಾಂಗ್ರೆಸ್ಸಿಗೆ ತಿರುಗೇಟು ನೀಡಲು ಕುಮಾರಸ್ವಾಮಿ ತಂತ್ರ ರೂಪಿಸಿದ್ದಾರೆ. ಬಿಜೆಪಿಯ ಕೆಲವು ನಾಯಕರ ಸಂಪರ್ಕದಲ್ಲಿದ್ದಾರೆ.

ಬೆಳಗಾವಿ, ಧಾರವಾಡ, ಶಿವಮೊಗ್ಗ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್‌, ವಿಜಯಪುರ, ಉತ್ತರ ಕನ್ನಡ ಭಾಗದಲ್ಲಿ ಬಿಜೆಪಿ, ಜೆಡಿಎಸ್‌ ನೆರವು ಬಯಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಬೆಂಬಲ ನಿರೀಕ್ಷಿಸಿದೆ ಎಂದು ಹೇಳಲಾಗಿದೆ. ಅಚ್ಚರಿ ಎಂದರೆ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಗೌಡರ ಮನವೊಲಿಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೆಡಿಎಸ್‌ನ ಪ್ರಭಾವಿ ಶಾಸಕರು ಹಾಗೂ ಮುಖಂಡರನ್ನು ಸೆಳೆಯಲು ಜಂಟಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಎಚ್‌.ಡಿ.ದೇವೇಗೌಡರು ಆಕ್ರೋಶಗೊಂಡಿದ್ದಾರೆ.

ಮಂಡ್ಯ, ಮೈಸೂರು, ತುಮಕೂರು, ಮೈಸೂರು ಬಳಿಕ ಹಾಸನದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಯುತ್ತಿದೆ ಎಂಬುದನ್ನು ದೇವೇಗೌಡರಿಗೂ ವಿವರಿಸಲಾಗಿದೆ ಎನ್ನಲಾಗುತ್ತಿದೆ.

-ಎಸ್‌. ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next