ಮೈಸೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಭೂ ಒತ್ತುವರಿ ಆರೋಪಗಳನ್ನು ಮಾಡಲಾಗಿದೆ ಎಂದು ವಿಪ ಮಾಜಿ ಸದಸ್ಯ ಗೋ.ಮಧುಸೂದನ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿ ಮಂಗಲ ಗ್ರಾಮದ ಸರ್ವೆ ನಂ.20ರಲ್ಲಿ ಟೈಗರ್ ರಾಂಚ್ ಬಳಿ ತಮ್ಮ ಮಾಲೀಕತ್ವದ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ಈಗಾಗಲೇ ಇತ್ಯರ್ಥವಾಗಿದೆ. ತಾವು ಯಾವುದೇ ಅರಣ್ಯ ಒತ್ತುವರಿ ಮಾಡಿಲ್ಲ.
ಪರಿಶಿಷ್ಟರ ಭೂಮಿಯನ್ನೂ ಖರೀದಿಸಿಲ್ಲ. ಆ ರೀತಿ ಖರೀದಿ ಮಾಡಿದ್ದ 18 ಎಕರೆ ಜಮೀನನ್ನು ಈಗಾಗಲೇ ಸರ್ಕಾರದ ವಶಕ್ಕೆ ನೀಡಿದ್ದೇನೆ. ಕಾನೂನು ರೀತ್ಯಾ ಖರೀದಿಸಿದ ಭೂಮಿಯಷ್ಟೇ ಸದ್ಯ ನನ್ನ ವಶದಲ್ಲಿದೆ ಎಂದು ಸ್ಪಷ್ಟಪಡಿಸಿದರು. ಟೈಗರ್ ರಾಂಚ್‌ಗೆ ಸಂಬಂಧಿಸಿದ ಜಮೀನಿನ ವ್ಯಾಜ್ಯ 1994-95ರದ್ದು, ಈಗಾಗಲೇ ಹೈಕೋರ್ಟ್ ಇದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿದೆ.
ಹೀಗಿದ್ದರೂ ಯಥಾಸ್ಥಿತಿ ಕಾಯ್ದುಕೊಳ್ಳುವ ಬದಲು ಎಲ್ಲ ಜಮೀನಿನ ದಾಖಲೆಗಳನ್ನು ಸರ್ಕಾರಿ ಖಾತೆಗೆ ವರ್ಗಾಯಿಸಿ ನನಗೆ ಯಾವುದೇ ಲಿಖೀತ ನೋಟಿಸನ್ನು ನೀಡದೇ, ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಬಾಡಿಗೆ ಜನರಿಂದ ಅಲ್ಲಿ ನಿರ್ಮಾಣವಾಗಿದ್ದ ಕಾಟೇಜ್ ತೆರವುಗೊಳಿಸಿರುವುದು ಅನ್ಯಾಯ ಎಂದರು.
ಇದು ನನ್ನ ಮೇಲಿನ ಆರೋಪ ಅಲ್ಲ. ಬದಲಿಗೆ ಬಿಜೆಪಿ ವಿರುದ್ಧ ಮಾಡಿರುವ ಸಂಚು ಎಂದು ಕಿಡಿಕಾರಿದ ಅವರು, ಈ ಒತ್ತುವರಿ ತೆರವು ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.