ಇತ್ತೀಚೆಗೆ ಮಂಗಳೂರಿನಲ್ಲಿ “ಕರಾವಳಿ ಪರಂಪರೆ ಮತ್ತು ಕಲೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಆಧುನಿಕ ಕಲೆಯ ವಿಕಾಸ’ ಎನ್ನುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.
ದೃಶ್ಯಕಲೆಯ ಬಹುಮುಖ್ಯವಾದ ಅಂಶಗಳನ್ನು ಚರ್ಚಿಸಲು ಮಂಗಳೂರು ವಿ.ವಿ., ಕಲಾವಿದ ಎನ್. ಜಿ. ಪಾವಂಜೆ ಲಲಿತಕಲಾ ಪೀಠ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಈ ವೇದಿಕೆಯನ್ನೊದಗಿಸಿತ್ತು. ಮೊದಲನೆಯ ದಿನದ ಗೋಷ್ಠಿಗಳಲ್ಲಿ ನಿಟ್ಟೆ ವಿ.ವಿ.ಯ ತುಳು ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ| ಸಾಯಿಗೀತಾ ಹೆಗ್ಡೆ ಮತ್ತು ಉಡುಪಿಯ ಆರ್‌ಆರ್‌ಸಿ ಸಂಯೋಜಕರಾದ ಪ್ರೊ| ವರದೇಶ ಹಿರೇಗಂಗೆ ಕರಾವಳಿಯ ಧಾರ್ಮಿಕ ಆಚರಣೆಯಲ್ಲಿ ಕಲಾವಂತಿಕೆಯ ಅಂಶಗಳನ್ನು ಚರ್ಚಿಸಿದರು. ಎರಡನೆಯ ಗೋಷ್ಠಿಯಲ್ಲಿ ತುಳುನಾಡಿನ ವಾಸ್ತುಶಿಲ್ಪಗಳ ಭಿನ್ನತೆ ಮತ್ತು ಕಟ್ಟಡ ಗಳ ಮೇಲೆ ಪಾಶ್ಚಾತ್ಯ ಪ್ರಭಾವ, ವಿನ್ಯಾಸಗಳಲ್ಲಿ ಪ್ರಾದೇಶಿಕತೆಗಳನ್ನು ವಿವರಿಸುತ್ತ ಮಂಗಳೂರು ಇನ್‌ಟ್ಯಾಕ್ ವಿಭಾಗದ ವಾಸ್ತುತಂತ್ರಜ್ಞ ಮತ್ತು ಮುಖ್ಯಸ್ಥ ಸುಭಾಷ್ ಬಸು ಮತ್ತು ಮಣಿಪಾಲ ಎಂಐಟಿಯ ವಾಸ್ತುಶಿಲ್ಪ ವಿಭಾಗದ ದೀಪಿಕಾ ಶೆಟ್ಟಿ ತುಳುನಾಡಿನ ಪಾರಂಪರಿಕ ವಾಸ್ತುಕಲೆಯ ಬಗೆಗೆ ವಿಚಾರ ಗಳನ್ನು ಮಂಡಿಸಿದರು. 3ನೇ ಗೋಷ್ಠಿಯಲ್ಲಿ ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ವಾಣಿಜ್ಯ ವಿಭಾಗದ ಅಧ್ಯಾಪಕ ಡಾ| ಆಶಾಲತಾ ಎಸ್. ಸುವರ್ಣ ತುಳುನಾಡಿನ ಪಾರಂಪರಿಕ ಭೌತಿಕ ವಸ್ತುಪರಿಕರಗಳಲ್ಲಿ ಕಲಾವಂತಿಕೆಯ ಅಂಶಗಳನ್ನು ವಿಶ್ಲೇಷಿಸಿದರು.
2ನೆಯ ದಿನದ ಗೋಷ್ಠಿಗಳಲ್ಲಿ ಉಡುಪಿಯ ಆರ್.ಆರ್.ಸಿ.ಯಲ್ಲಿ ಸಂಶೋಧನ ನಿರತರಾಗಿರುವ ಕಲಾವಿದ ಜನಾರ್ದನ ಹಾವಂಜೆ ಕರಾವಳಿಯ ಪ್ರಾಚೀನ ಚಿತ್ರಕಲೆಯ ಬಗೆಗೆ ವಿವರಿಸಿದರು. ಉಪಾಧ್ಯಾಯ ಮೂಡುಬೆಳ್ಳೆ ಜನಪದ ಕ್ರೀಡೆಗಳೊಂದಿಗಿನ ಪರಿಸರ ಹೇಗೆ ಕಲಾಕಾರರ ಮೇಲೆ ಪರಿಣಾಮ ಬೀರುವುದನ್ನು ವಿವರಿಸಿದರು.
ಆರನೇ ಗೋಷ್ಠಿಯಲ್ಲಿ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಎನ್.ಎಸ್.ಪತ್ತಾರರು ಕರಾವಳಿ ಜಿಲ್ಲೆಗಳಲ್ಲಿ ಆಧುನಿಕ ಕಲೆಯ ಇತ್ತೀಚಿನ ಬೆಳವಣಿಗೆಗಳ ಬಗೆಗೆ ವಿಚಾರ ಮಂಡಿಸಿದರು. ಕರಾವಳಿಯಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಹೆಸರು ಗಳಿಸಿದ ಕಲಾವಿದರಾದ ಸುದರ್ಶನ್ ಶೆಟ್ಟಿ, ಎಲ್.ಎನ್. ತಲ್ಲೂರು ಮತ್ತು ಮಂಜುನಾಥ ಕಾಮತ್ ಅವರ ಕೆಲವು ಕಲಾಕೃತಿಗಳ ಬಗೆಗಿನ ವಿಶ್ಲೇಷಣೆಯನ್ನು ಹೊಸದಿಲ್ಲಿಯಲ್ಲಿ ವಿಶುವಲ್ ಥಿಯರಿಸ್ಟ್ ಆಗಿರುವ ಶಾಲ್ಮಲಿ ಶೆಟ್ಟಿ ನಡೆಸಿದರು.
ಮಣಿಪಾಲ ವಿ.ವಿ.ಯ ಸೃಜನಾತ್ಮಕ ಮತ್ತು ಸಾಂಸ್ಕೃತಿಕ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ| ಉನ್ನಿಕೃಷ್ಣನ್ ಕಲಾಶಿಕ್ಷಣದಲ್ಲಿನ ಸನ್ನಿವೇಶ, ಸವಾಲು ಮತ್ತು ಯೋಜನೆಗಳ ಕುರಿತು ಪ್ರಬಂಧ ಮಂಡಿಸಿದರು. ಕೊನೆಯ ಗೋಷ್ಠಿಯಲ್ಲಿ ಇಂದಿನ ಸಮಕಾಲೀನ ಕಲೆಯಲ್ಲಿನ ಸವಾಲುಗಳ ಬಗೆಗೆ ವೀಕ್ಷಕ ಸಹೃದಯರೊಡನೆ ನೇರ ಸಂವಾದಗಳ ಮೂಲಕ ಚರ್ಚಿಸಿದವರು ಎಂ. ಶಾಂತಾಮಣಿ ಮತ್ತು ಪ್ರೊ| ಸುರೇಶ್ ಜಯರಾಂ. ಕರಾವಳಿಯ ಯುವ ಕಲಾವಿದರ ಕಲಾಕೃತಿ ಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದುದು ಉತ್ತಮ ಬೆಳವಣಿಗೆ. ಇದರ ಹಿಂದೆ ಶ್ರಮಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಕಲಾವಿದ ರಾಜೇಂದ್ರ ಕೇದಿಗೆ, ಮಂಗಳೂರು ವಿ.ವಿ. ಪ್ರಾಧ್ಯಾಪಕ ಡಾ| ರವಿಶಂಕರ್ ಮತ್ತು ಸಹಕರಿಸಿದ ಎನ್.ಜಿ. ಪಾವಂಜೆ ಲಲಿತಕಲಾ ಪೀಠದ ಎಲ್ಲರೂ ಅಭಿನಂದನಾರ್ಹರು.
ಭಾವನಾ