Advertisement

ಆಗದ ವೆಚ್ಚ: ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ

06:00 AM Sep 13, 2018 | Team Udayavani |

ಬೆಂಗಳೂರು: ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಿದ ಸಮ್ಮಿಶ್ರ ಸರ್ಕಾರ ಬಜೆಟ್‌ ಕಾರ್ಯಕ್ರಮಗಳು ಸೇರಿದಂತೆ ಯೋಜನೆಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿದೆಯೇ? ಹೌದು ಎನ್ನುತ್ತವೆ ಆರ್ಥಿಕ ಇಲಾಖೆ ಅಂಕಿ ಸಂಕಿಗಳು.

Advertisement

ಪ್ರಸಕ್ತ ಆರ್ಥಿಕ ವರ್ಷದ ಆರಂಭದ ಮೂರು ತಿಂಗಳು ಋಣಾತ್ಮಕವಾಗಿದ್ದ ರಾಜ್ಯದ ಆದಾಯ ಸಂಗ್ರಹ ಜುಲೈ ತಿಂಗಳಿನಿಂದ ಸಾಕಷ್ಟು ಸುಧಾರಣೆ ಕಂಡು ಧನಾತ್ಮಕವಾಗಿ ಸಾಗುತ್ತಿದೆಯಾದರೂ ವೆಚ್ಚದಲ್ಲಿ ಮಾತ್ರ ಗಮನಾರ್ಹ ಬೆಳವಣಿಗೆ ಕಂಡುಬಂದಿಲ್ಲ. ಇದುವರೆಗೆ ಒಟ್ಟು ಬಜೆಟ್‌ ವೆಚ್ಚದ ಶೇ. 20ರಷ್ಟು ಮಾತ್ರ ವೆಚ್ಚ ಆಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟೂ ಇಲ್ಲ. ಯೋಜನಾ ವೆಚ್ಚ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು 2018-19ನೇ ಸಾಲಿಗೆ 2.13 ಲಕ್ಷ ಕೋಟಿ ರೂ. ಪರಿಷ್ಕೃತ ವೆಚ್ಚದ ಬಜೆಟ್‌ ಮಂಡಿಸಿದ್ದು, ಇದರಲ್ಲಿ 2,07,352 ಕೋಟಿ ರೂ. ವೆಚ್ಚ ಮಾಡುವುದಾಗಿ ಹೇಳಿದ್ದರು. ಆದರೆ, ಜುಲೈ ಅಂತ್ಯದವರೆಗೆ 29,079 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಇದು ಒಟ್ಟು ಬಜೆಟ್‌ ವೆಚ್ಚದ ಶೇ. 14ರಷ್ಟಿದೆ. 2017-18ನೇ ಸಾಲಿನಲ್ಲಿ ಇದೇ ಅವಧಿಗೆ ಬಜೆಟ್‌ ವೆಚ್ಚದ ಶೇ. 30.4ರಷ್ಟು ವೆಚ್ಚ ಮಾಡಲಾಗಿತ್ತು.

ಈ ಪೈಕಿ ಆದಾಯ ಆಧರಿಸಿ ಮಾಡುವ ವೆಚ್ಚದಲ್ಲಿ 35,653 ಕೋಟಿ ರೂ. ವೆಚ್ಚವಾಗಿದೆ. ಇದು ವಾರ್ಷಿಕ ಆದಾಯ ಆಧರಿಸಿ ಮಾಡುವ ವೆಚ್ಚದ (1.66 ಕೋಟಿ ರೂ.) ಶೇ. 21.4ರಷ್ಟಿದೆ. ಅದರಲ್ಲಿ ಶೇ. 42ರಷ್ಟು ಸರ್ಕಾರಿ ನೌಕರರ ವೇತನಕ್ಕೆ ಹೋದರೆ, ಯೋಜನೆಗಳಿಗೆ ವೆಚ್ಚವಾಗಿರುವುದು ಸುಮಾರು 20 ಸಾವಿರ ಕೋಟಿ ರೂ. ಮಾತ್ರ. ಇದರಲ್ಲಿ ಮುಂದುವರಿದ ಕಾರ್ಯಕ್ರಮಗಳ ಪಾಲೇ ಹೆಚ್ಚಾಗಿದ್ದು, ಹೊಸ ಕಾರ್ಯಕ್ರಮಗಳಾವುವೂ ಜಾರಿಯಾಗಿಲ್ಲ ಎಂದು ತಿಳಿದುಬಂದಿದೆ.

2017ರ ಜುಲೈ ಅಂತ್ಯಕ್ಕೆ ಒಟ್ಟು 29, 971 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ ಸಂಗ್ರಹವಾಗಿದ್ದರೆ, ಈ ಆದಾಯ ಆಧರಿಸಿ 50,195 ಕೋಟಿ ರೂ. ವೆಚ್ಚ ತೋರಿಸಲಾಗಿತ್ತು. ಇದರಲ್ಲಿ ಸಾಲ ಸೇರಿದಂತೆ ಲೆಕ್ಕ ಹೊಂದಾಣಿಕೆಯೂ ಸೇರಿದೆ. ಆದರೆ, 2018ರ ಜುಲೈ ಅಂತ್ಯಕ್ಕೆ 31102 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ ಸಂಗ್ರಹವಾಗಿದ್ದರೆ, ಈ ಆದಾಯ ಆಧರಿಸಿ 35,653 ಕೋಟಿ ರೂ. ಮಾತ್ರ ವೆಚ್ಚ ಮಾಡಲಿದೆ. ಇದರಲ್ಲೂ ಸಾಲ ಮತ್ತು ಲೆಕ್ಕ ಹೊಂದಾಣಿಕೆ ಸೇರಿಕೊಂಡಿದೆ.

Advertisement

ವೆಚ್ಚ ಕಡಿಮೆಗೆ ಕಾರಣಗಳೇನು?:
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಷ್ಕೃತ ಬಜೆಟ್‌ ಮಂಡಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸುವುದರ ಜತೆಗೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಲಾಯಿತು. ಪ್ರಸ್ತುತ ಹೊಸ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳಲ್ಲಿ ರೈತರ ಸಾಲ ಮನ್ನಾ ಯೋಜನೆ ಮಾತ್ರ ಜಾರಿಯಾಯಿತೇ ಹೊರತು ಉಳಿದ ಕಾರ್ಯಕ್ರಮಗಳ ಜಾರಿಗೆ ಇನ್ನೂ ಸರ್ಕಾರಿ ಆದೇಶ ಹೊರಡಿಸಿಲ್ಲ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಬಜೆಟ್‌ನಲ್ಲಿ 2018-19ನೇ ಸಾಲಿಗೆ ಹೊಸದಾಗಿ ಘೋಷಿಸಿದ ಯಾವುದೇ ಕಾರ್ಯಕ್ರಮಗಳು ಇನ್ನೂ ಜಾರಿಗೆ ಬಂದಿಲ್ಲ.

ಪ್ರತಿ ವರ್ಷ ಏಪ್ರಿಲ್‌ನಿಂದ ಹೊಸ ಬಜೆಟ್‌ ಅನ್ವಯವಾಗುತ್ತದೆಯಾದರೂ ಬಜೆಟ್‌ನಲ್ಲಿ ಘೋಷಿಸಿದ ಹೊಸ ಕಾರ್ಯಕ್ರಮಗಳು ಜಾರಿಯಾಗುವುದು ಜುಲೈ ತಿಂಗಳ ನಂತರ. ಈ ಬಾರಿ ಫೆಬ್ರವರಿಯಲ್ಲೇ ಬಜೆಟ್‌ ಮಂಡನೆಯಾಯಿತಾದರೂ ನಂತರ ವಿಧಾನಸಭೆ ಚುನಾವಣೆ ಬಂದಿದ್ದರಿಂದ ಹೊಸ ಕಾರ್ಯಕ್ರಮಗಳನ್ನು ಘೋಷಿಸಲು ಸಾಧ್ಯವಾಗಿಲ್ಲ. ನಂತರ ಬಂದ ಸಮ್ಮಿಶ್ರ ಸರ್ಕಾರ ಹೊಸ ಬಜೆಟ್‌ ಮಂಡಿಸಲು ನಿರ್ಧರಿಸಿದ್ದರಿಂದ ಜೂನ್‌ ತಿಂಗಳಲ್ಲಿ ಆ ಬಜೆಟ್‌ಗೆ ಸಿದ್ಧತೆಗಳನ್ನು ಮಾಡಲಾಯಿತೇ ಹೊರತು ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಾಗಿಲ್ಲ. ಜುಲೈ ಮೊದಲ ವಾರದಲ್ಲಿ ಹೊಸ ಬಜೆಟ್‌ ಮಂಡನೆಯಾಯಿತಾದರೂ ಸಾಲ ಮನ್ನಾ ಯೋಜನೆ ಜಾರಿಗೆ ಆದ್ಯತೆ ನೀಡಿದ್ದರಿಂದ ಇತರೆ ಯೋಜನೆಗಳ ಬಗ್ಗೆ ಗಮನಹರಿಸಿಲ್ಲ. ಇದೀಗ ಸಾಲ ಮನ್ನಾ ಜಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹೊಸ ಕಾರ್ಯಕ್ರಮಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ ವೇಳೆಗೆ ಈ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಕೆಲವೊಂದು ಕಾರ್ಯಕ್ರಮಗಳ ಬಗ್ಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದ್ದು, ಅದನ್ನು ಆಧರಿಸಿ ಜಾರಿ ಆದೇಶ ಹೊರಡಿಸಲಾಗುವುದು ಎಂದು ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

– ಪ್ರದೀಪ್‌ ಕುಮಾರ್‌ಎಂ.

Advertisement

Udayavani is now on Telegram. Click here to join our channel and stay updated with the latest news.

Next