ಚಾಮರಾಜನಗರ: ಆಟೋ ಬಿಡಿಭಾಗಗಳ ಅಂಗಡಿಯೊಂದಕ್ಕೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲು 7 ಸಾವಿರ ರೂ. ಲಂಚ ಪಡೆಯುತ್ತಿದ್ದ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಇಬ್ಬರು ಇನ್ಸ್ ಪೆಕ್ಟರ್‌ಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್‌ಗಳಾದ ಅವಿನಾಶ್ ಹಾಗೂ ರವಿಕುಮಾರ್ ಎಸಿಬಿ ಬಲೆಗೆ ಸಿಕ್ಕಿಬಿದ್ದವರು. ತಾಲೂಕಿನ ನಾಗವಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಚಿಕ್ಕದಾಗಿ ವಾಹನ ಆಟೋ ಬಿಡಿಭಾಗಗಳ ಅಂಗಡಿ ಇಟ್ಟುಕೊಂಡಿದ್ದರು. ಈ ಅಂಗಡಿಗೆ ಜಿಎಸ್‌ಟಿ ಕಟ್ಟದೇ ಇರುವ ಬಗ್ಗೆ ದಂಡ ಕಟ್ಟುವಂತೆ ಇನ್ಸ್‌ಪೆಕ್ಟರ್ ಅವಿನಾಶ್ ನೋಟಿಸ್ ನೀಡಿದ್ದರು.
ಇದನ್ನೂ ಓದಿ:- ಕಸ ವಿಲೇವಾರಿ ಘಟಕದ ವಿರುದ್ಧ ತೀವ್ರ ಪ್ರತಿಭಟನೆ
ದೂರುದಾರರು ನಗರದಲ್ಲಿರುವ ರಾಜ್ಯ ಜಿಎಸ್‌ಟಿ ಕಚೇರಿಗೆ ಹೋದಾಗ ಈ ನೋಟಿಸ್ ರದ್ದು ಮಾಡಲು ಹಾಗ ಜಿಎಸ್‌ಟಿ ನೋಂದಣಿ ಮಾಡಿಸದೇ ಇರಲು 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಕೊನೆಗೆ 7 ಸಾವಿರ ರೂ. ಗೆ ಒಪ್ಪಿಕೊಂಡಿದ್ದರು ಎಂದು ದೂರು ನೀಡಲಾಗಿತ್ತು. ಶನಿವಾರ ಎಸಿಬಿ ಪೊಲೀಸರು ಈ ಬಗ್ಗೆ ಕಾರ್ಯಾಚರಣೆ ಕೈಗೊಂಡರು.
ದೂರುದಾರರಿಂದ ತಮ್ಮ ಕಚೇರಿಯಲ್ಲಿ ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್‌ಗಳಾದ ಅವಿನಾಶ್ ಹಾಗೂ ರವಿಕುಮಾರ್ ಅವರು 7 ಸಾವಿರ ರೂ. ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.