ಪ್ಯಾರೀಸ್: ನವಭಾರತದಲ್ಲಿ ಭ್ರಷ್ಟಾಚಾರಕ್ಕೆ, ಸ್ವಜನ ಪಕ್ಷಪಾತಿಗಳಿಗೆ, ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿರುವವರಿಗೆ ಹಾಗೂ ಭಯೋತ್ಪಾದಕರಿಗೆ ಮೂಗುದಾರ ಹಾಕಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ ಫ್ರಾನ್ಸ್ ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ನಮಗೆ ಅಧಿಕಾರ ಕೊಟ್ಟಿದ್ದು ಕೇವಲ ಸರಕಾರ ರಚಿಸಲು ಮಾತ್ರವಲ್ಲ. ನವಭಾರತದಲ್ಲಿ ಉದ್ಯಮದ ಹಾದಿಯನ್ನು ಸುಗಮಗೊಳಿಸುವ ಮೂಲಕ ಬದುಕಿನ ಮಾರ್ಗವು ಸುಲಭ ಮಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ನವಭಾರತದಲ್ಲಿ ಉದ್ಯಮಿಸ್ನೇಹಿ ವಾತಾವರಣ ನಿರ್ಮಿಸುತ್ತಿದ್ದು, ಭಾರತವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದರು.
ಭಾರತ ವಿಶ್ವದ ಮುಂಚೂಣಿಯಾಗಿ ಬೆಳೆಯುತ್ತಿದೆ ಎಂದರೆ ಅದಕ್ಕೆ ಮೋದಿ ಕಾರಣವಲ್ಲ. ಇದಕ್ಕೆ ಭಾರತದ ಜನರು ನಮಗೆ ನೀಡಿದ ಪರಮಾಧಿಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.
1950-1960ರಲ್ಲಿ ಪತನಗೊಂಡಿದ್ದ ಎರಡು ಏರ್ ಇಂಡಿಯಾ ಸಂತ್ರಸ್ತರ ಸ್ಮರಣಾರ್ಥ ನಿರ್ಮಿಸಲಾದ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.