Advertisement

ಮತ ಚೀಟಿಯಲ್ಲಿರುವ ತಪ್ಪು ಸರಿಪಡಿಸಿ

01:33 PM Sep 02, 2019 | Team Udayavani |

ಚಿಕ್ಕಮಗಳೂರು: ಬೆಟ್ಟಕ್ಕೆ ಬೆಂಕಿ ಬಿದ್ದ ನಂತರ ಬಾವಿ ತೋಡಿದರು ಎಂಬಂತಾಗದೆ ಚುನಾವಣೆಗೂ ಮೊದಲೇ ಮತದಾರರ ಪಟ್ಟಿಯಲ್ಲಿ ಇರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತದಾರರು ಮುಂದಾಗಬೇಕು ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಉಮೇಶ್‌ ಅಡಿಗ ಹೇಳಿದರು.

Advertisement

ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಆಯೋಜಿಸಿದ್ದ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020ನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಆಯೋಜಿಸಿರುವ ಈ ಕಾರ್ಯಕ್ರಮ ಬಹಳ ಪ್ರಮುಖವಾದುದು. ಪ್ರತಿ ಚುನಾವಣೆಯಲ್ಲಿಯೂ ಸಾಕಷ್ಟು ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ. ಹೆಸರಿದ್ದರೂ ಸಾಕಷ್ಟು ತಪ್ಪುಗಳಿವೆ ಎಂದು ಹೇಳುತ್ತಲೇ ಇರುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಇರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ವರ್ಷ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ ಈ ವರ್ಷ ಭಾರತ ಚುನಾವಣಾ ಆಯೋಗದಿಂದ ಬಂದಿರುವ ನಿರ್ದೇಶನಗಳ ಅನುಸಾರ ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಬೂತ್‌ ಮಟ್ಟದ ಅಧಿಕಾರಿಗಳ ಜತೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಜಿಲ್ಲೆಯಲ್ಲಿರುವ ಎಲ್ಲಾ ಮತದಾರರ ಮನೆ-ಮನೆಗಳಿಗೂ ಸೆ.1 ರಿಂದ 30ರವರೆಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿಯಲ್ಲಿ ಇರುವಂತಹ ಲೋಪದೋಷಗಳನ್ನು ನಿವಾರಿಸುವ ಕೆಲಸ ಮಾಡಿ, ಪ್ರಜಾ ಸ್ವಾಮ್ಯ ಪದ್ಧತಿಯನ್ನು ಬಲಪಡಿಸಲಾಗುವುದು ಎಂದರು.

ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಈ ವರ್ಷದಿಂದ ಕೇಂದ್ರ ಸರ್ಕಾರದ ನಿರ್ದೇಶನದಂತೆ ಮತದಾರರ ವಿವರಗಳನ್ನು ಮತದಾರರ ಮನೆಗಳಿಗೆ ತೆರಳಿ ಮತದಾರರ ಗುರುತಿನ ಚೀಟಿಯಲ್ಲಿರುವ ದೋಷಗಳನ್ನು ಸರಿಪಡಿಸಲಾಗುವುದು. ಮತದಾರರು ಸ್ವಯಂ ಪ್ರೇರಿತವಾಗಿಯೂ ಸಹಾಯವಾಣಿ ಮೊಬೈಲ್ ಆ್ಯಪ್‌, ಹೊಸ ಎನ್‌ವಿಎಸ್‌ಪಿ ಪೋರ್ಟಲ್, 1950 ಮತದಾರರ ಸಹಾಯವಾಣಿ ಅಥವಾ ಹತ್ತಿರಾದ ಕೇಂದ್ರಗಳಾದ ಸಾಮಾನ್ಯ ಸೇವಾ ಕೇಂದ್ರ, ಮತದಾರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಕರ್ನಾಟಕ ಒನ್‌, ಗ್ರಾಪಂ ಕಚೇರಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರ, ಮತಗಟ್ಟೆ ಅಧಿಕಾರಿಗಳನ್ನು ಭೇಟಿ ಮಾಡಿ ಗುರುತಿನ ಚೀಟಿಯಲ್ಲಿರುವ ಲೋಪದೋಷ ಸರಿಪಡಿಸಿಕೊಳ್ಳಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣೆಯಲ್ಲಿ ಮತದಾರರ ಪಟ್ಟಿಯು ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯು ಆರೋಗ್ಯಕರ ಮತ್ತು ಲೋಪದೋಷಗಳಿಂದ ಮುಕ್ತವಾಗಿರಬೇಕೆಂಬ ಉದ್ದೇಶದಿಂದ ಸಾರ್ವಜನಿಕರಿಗೆ ಹಾಗೂ ಎಲ್ಲಾ ಮತದಾರರಿಗೆ ಸುವರ್ಣಾವಕಾಶ ನೀಡಲಾಗಿದೆ ಎಂದರು.

Advertisement

ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020 ರ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ, ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ನಗರಸಭೆ ಆಯುಕ್ತ ಪರಮೇಶಿ, ತಹಶೀಲ್ದಾರ್‌ ನಂದಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next