ಕಲಬುರಗಿ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವುದು, ಸಂವಿಧಾನದ 371ನೇ ಕಲಂ ಅನ್ವಯ ನೇಮಕಾತಿಯಲ್ಲಿ ನಡೆಯುತ್ತಿರುವ ಅನ್ಯಾಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಸುಲಫಲ ಮಠದ ಹಾಗೂ ಶ್ರೀಶೈಲಂ ಸಾರಂಗ ಪೀಠದ ಪೀಠಾಧಿಪತಿ ಜಗದ್ಗುರು ಡಾ| ಸಾರಂಗಧರೇಶ್ವರ ದೇಶೀ ಕೇಂದ್ರ ಸ್ವಾಮಿಗಳ ನೇತೃತ್ವದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕದ ಭಾಗದ ನೀರಾವರಿ ಯೋಜನೆಗಳು ಪೂರ್ಣಗೊಳಿಸಿ ರೈತನ ಹೊಲಗಳಿಗೆ ನೀರು ಹರಿಸಬೇಕು, ನಿರುದ್ಯೋಗ ನಿವಾರಣೆಗಾಗಿ ಬೃಹತ್ ಕೈಗಾರಿಕೆ ವಲಯವನ್ನು ಉತ್ತೇಜಿಸಬೇಕು ಹಾಗೂ ಸಂವಿಧಾನದ 371ನೇ ಕಲಂ ತಿದ್ದುಪಡಿ ನಂತರ ನ್ಯಾಯಯುತವಾಗಿ ಸ್ಥಳೀಯರಿಗೆ ಸಿಗಬೇಕಾದ ಉದ್ಯೋಗಗಳು ಗೊಂದಲದಿಂದ ಸ್ಥಳೀಯ ಅರ್ಹರು ವಂಚಿತರಾಗುತ್ತಿದ್ದು, ಕೂಡಲೇ ನಿವಾರಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯ ಮಂತ್ರಿಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಬಜೆಟ್‌ನಲ್ಲಿ ಪ್ರಾತಿನಿಧ್ಯ ನೀಡಲಾಗುವುದು. ಪ್ರಮುಖವಾಗಿ ಉದ್ಯೋಗ ಹಾಗೂ ನೇಮಕಾತಿಗಳಲ್ಲಿನ ಗೊಂದಲ ನಿವಾರಣೆಗಾಗಿ ಸಭೆಯೊಂದನ್ನು ಕರೆಯಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸೊನ್ನ ದಾಸೋಹ ಮಠದ ಡಾ| ಶಿವಾನಂದ ಸ್ವಾಮಿಗಳು, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಮುಖಂಡರಾದ ಅಂಬಾರಾಯ ಬೆಳಕೋಟಿ, ನಾಗಲಿಂಗಯ್ಯ ಮಠಪತಿ, ಸುರೇಶ ತಂಗಾ, ರಾಜೇಂದ್ರ ಕುಣಚಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.