Advertisement

ಬಜೆಟ್‌ನಲ್ಲಿ ತಾರತಮ್ಯ ಅಸಮತೋಲನ ಸರಿಮಾಡಿ

06:00 AM Jul 07, 2018 | |

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ಗುರುವಾರ ಮಂಡಿಸಿದ ಆಯವ್ಯಯದ ಕುರಿತಂತೆ ಚರ್ಚೆಗಳು ಇನ್ನೂ ಮುಂದುವರಿದಿವೆ. ಆಡಳಿ ತಾ ರೂಢ ಮೈತ್ರಿಕೂಟದ ಭಾಗವಾದ ಕಾಂಗ್ರೆಸ್‌ನ ಕೆಲ ಶಾಸಕರಿಂದಲೇ ಬಜೆಟ್‌ನ ಬಗೆಗೆ ಅಪಸ್ವರ ಕೇಳಿ ಬಂದಿದೆ. ವಿಪಕ್ಷ ಬಿಜೆಪಿಯಂತೂ ಇದನ್ನು ಅಣ್ಣ- ತಮ್ಮಂದಿರ ಬಜೆಟ್‌ ಎಂದು ಜರೆದಿದೆ. ಇದರಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿ ಇಲ್ಲ ಎಂಬ ಟೀಕೆಯ ನಡುವೆಯೇ ಪ್ರಾದೇಶಿಕ ಅಸಮಾನತೆಗೆ  ಇದು ಕಾರಣವಾಗಲಿದೆ ಎಂಬುದು ಸದ್ಯದ ಆತಂಕ.

Advertisement

ಎರಡನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಕುಮಾರಸ್ವಾಮಿ ಅವರು ಮಂಡಿಸಿದ ಮೊದಲ ಬಜೆಟ್‌ ಇದಾಗಿದ್ದರೂ ಇವರಿಗೆ ರಾಜಕೀಯ, ಆಡಳಿತ ಹೊಸದೇನಲ್ಲ. ತಂ¨, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಗರಡಿಯಲ್ಲಿ ಬೆಳೆದು ಬಂದಿರುವ ಕುಮಾರಸ್ವಾಮಿಗೆ ತಿಳಿಯದಿದ್ದುದು ಏನೂ ಇಲ್ಲ. ಇವೆಲ್ಲದರ ಹೊರತಾಗಿಯೂ ಅವರು ಹಳೇ ಮೈಸೂರು ಪ್ರಾಂತ್ಯವನ್ನು ಮಾತ್ರವೇ ಪರಿಗಣಿಸಿ ಬಜೆಟ್‌ ಮಂಡಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ದಶಕಗಳಿಂದಲೂ ಸರಕಾರಗಳ ತೀವ್ರ ಅವಗಣನೆಗೆ ತುತ್ತಾಗುತ್ತಲೇ ಬಂದಿರುವ ಉತ್ತರ ಕರ್ನಾಟಕ, ಅಭಿವೃದ್ಧಿಯ ದಿಸೆಯಲ್ಲಿ ಆಮೆಗತಿಯಲ್ಲಿ ಹೆಜ್ಜೆ ಹಾಕುತ್ತಿರುವ ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಪ್ರದೇಶಗಳಿಗೆ ಈ ಬಜೆಟ್‌ನಲ್ಲಿ ಮಹತ್ವದ್ದು ಎಂಬುದು ಏನೂ ಇಲ್ಲ. ಇನ್ನು “ದಕ್ಷಿಣದ  ಕಾಶ್ಮೀರ’  ಕೊಡಗಂತೂ ಮಾಯವಾಗಿದೆ. ಬಜೆಟ್‌ನ ಪ್ರಮುಖ ಘೋಷಣೆ ಯಾದ ರೈತರ ಬೆಳೆ ಸಾಲ ಮನ್ನಾದಿಂದಲೂ ಕರಾವಳಿ ಭಾಗದ ರೈತರಿಗೆ ಹೆಚ್ಚೇನೂ ಲಾಭವಿಲ್ಲ. ಲೆಕ್ಕ ಭರ್ತಿಗಾಗಿ ಒಂದೆರಡು ಯೋಜನೆಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಮತ್ತೇನೂ ಈ ಮೂರು ಭಾಗಗಳಿಗೆ ಸಿಕ್ಕಿಲ್ಲ. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಉತ್ತರ ಮತ್ತು ಮಧ್ಯ ಕರ್ನಾಟಕದ ಜನತೆ ಈ ಸರಕಾರದಿಂದ ಬಹಳಷ್ಟನ್ನು ನಿರೀಕ್ಷಿಸಿತ್ತು. ಅದರಲ್ಲೂ ಈ ಸಮ್ಮಿಶ್ರ ಸರಕಾರದ ನೇತೃತ್ವವನ್ನು  ಕುಮಾರಸ್ವಾಮಿ ವಹಿಸಲಿದ್ದಾರೆ ಎಂದಾಗಲಂತೂ ಸಹಜವಾಗಿ ಉತ್ತರ ಕರ್ನಾಟಕ ಭಾಗದ ಜನರು ಆ ಪ್ರದೇಶದಲ್ಲಿನ ಹಲವು ನೀರಾವರಿ ಯೋಜನೆಗಳು ಪೂರ್ಣಗೊಳ್ಳುವ ಮತ್ತು ನೀರಾವರಿಗೆ ಸಂಬಂ ಧಿಸಿದ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಲಭಿಸೀತು ಎಂಬ ನಿರೀಕ್ಷೆಯಲ್ಲಿದ್ದರು. ಇನ್ನು ಕರಾವಳಿ ಜಿಲ್ಲೆಗಳತ್ತಲೂ ಸರಕಾರಗಳು ದೃಷ್ಟಿ ಹರಿಸದಿರುವುದು ಹೊಸ ದೇನಲ್ಲ. ಕರಾವಳಿಯ 3 ಜಿಲ್ಲೆಗಳಲ್ಲಿ 19 ವಿಧಾನಸಭೆ ಕ್ಷೇತ್ರಗಳಷ್ಟೇ ಇರು ವುದರಿಂದ ಪ್ರತಿಯೊಂದು ಸರಕಾರವೂ ಈ ಜಿಲ್ಲೆಗಳತ್ತ ಗಮನ ಹರಿಸುತ್ತಿಲ್ಲ. ಈ ಬಾರಿಯಂತೂ ಕರಾವಳಿಯನ್ನು  ಸಂಪೂರ್ಣ  ಮರೆತಿದ್ದಾರೆ. ಇದು ಪ್ರಬುದ್ಧ ಆಡಳಿತಗಾರನಿಗೆ ಶೋಭೆಯೂ ಅಲ್ಲ.

ಜನರ ತೆರಿಗೆಯಿಂದ ಸಂಗ್ರಹವಾದ ಆದಾಯದ ಖರ್ಚು-ವೆಚ್ಚಗಳ ಕೈಪಿಡಿಯಂತಿರುವ ಬಜೆಟ್‌ನಲ್ಲಿ ಪ್ರಾದೇಶಿಕ, ಪ್ರಾಂತ್ಯಗಳ ನೆಲೆಯಲ್ಲಿ ತಾರತಮ್ಯ ಎಸಗಿರುವುದು ಪ್ರಶ್ನಾರ್ಹ. ಕಳೆದ ಕೆಲ ದಶಕಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಲೇ ಇದ್ದರೆ ಇತ್ತೀಚಿನ ಕೆಲ ವರ್ಷಗಳಲ್ಲಿ  ಬೇರೆಡೆಯೂ ಈ ಕೂಗು ಪ್ರತಿಧ್ವನಿಸಲಾರಂಭಿಸಿದೆ. ಇಂಥ ಸ್ಥಿತಿಯಲ್ಲಿ ಈ ಬಜೆಟ್‌ ಆ ಕೂಗಿಗೆ ಬಲ ತುಂಬುವುದೇ ಎಂಬುದು ಸದ್ಯದ ಆತಂಕ. ಜನಪ್ರತಿನಿಧಿಗಳಿಗೆ ತಮ್ಮ ತವರು ಕ್ಷೇತ್ರ, ಜಿಲ್ಲೆಗಳತ್ತ ಪ್ರೇಮವಿರುವುದು ಸಹಜ. ಆದರೆ ಅದಕ್ಕೂ ಒಂದು ಮಿತಿ ಇದೆ. ಇಂದಿನ ಅಭಿವೃದ್ಧಿ ಶಕೆಯಲ್ಲಿ ಮುಖ್ಯಮಂತ್ರಿಯೋರ್ವರು ರಾಜಕೀಯ ನೆಲೆಯಲ್ಲಿ ಬಜೆಟ್‌ ಮಂಡಿಸಿ ರಾಜ್ಯದ ಮುಕ್ಕಾಲು ಭಾಗವನ್ನು ನಿರ್ಲಕ್ಷಿಸಿದಲ್ಲಿ ವರ್ಷದ ಅವಧಿಯಲ್ಲಿ ಈ ಪ್ರದೇಶಗಳು ಅಭಿವೃದ್ಧಿಯ ನಾಗಾಲೋಟದಲ್ಲಿ ಎಡವುವುದು ನಿಶ್ಚಿತ. ಹೀಗಾದಾಗ ರಾಜ್ಯವೊಂದರ ಸಮಗ್ರ ಅಭಿವೃದ್ಧಿ ಯಾ ಗುವುದಿಲ್ಲ. ಈ ಹಿಂದೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ 20 ತಿಂಗಳು ಅಧಿಕಾರ ನಿರ್ವಹಿಸಿದ ಸಂದರ್ಭದಲ್ಲಿ ಜನರಲ್ಲಿ ಹೊಸ ಆಶಾವಾದವನ್ನು ಮೂಡಿಸಿದ್ದರು.  ಗ್ರಾಮ ವಾಸ್ತವ್ಯ, ಜನತಾ ದರ್ಶನದಂತಹ ಇವರ ಕಾರ್ಯಕ್ರಮಗಳು ಜನಮಾನಸದಲ್ಲಿ ಇಂದಿಗೂ ಉಳಿದಿದೆ. ಈ ಬಜೆಟ್‌ನಲ್ಲಿ ಗ್ರಾಮಾಭಿವೃದ್ಧಿ ಪ್ರಸ್ತಾವ “ನಾಮ್‌ ಕೇ ವಾಸ್ತೆ’ ಎಂಬಂತಾಗಿದೆ. 

ಮುಖ್ಯಮಂತ್ರಿಯಾದವರಿಗೆ ಇಡೀ ರಾಜ್ಯ ಪ್ರಥಮ ಆದ್ಯತೆ. ಅನಂತರ ಅವರ ಕ್ಷೇತ್ರ, ಜಿಲ್ಲೆ. ಅದು ಒಬ್ಬ ಮುತ್ಸದ್ದಿಯ ಗುಣವೂ ಹೌದು. ಆದರೆ  ಕುಮಾರಸ್ವಾಮಿ  ಮಂಡಿಸಿದ ಬಜೆಟ್‌ನಲ್ಲಿ ಇದ್ಯಾವ ಲಕ್ಷಣವೂ ಇಲ್ಲ. ರಾಜ್ಯದ ಅಭಿವೃದ್ಧಿಯ ಸೂಚ್ಯಂಕವನ್ನು ಏರಿಸಲು ಸಹಾಯಕವಾಗಬೇಕಿದ್ದ ಮುಂಗಡ ಪತ್ರ ಅಸಮತೋಲನದ ದ್ಯೋತಕವೆನಿಸಿರುವುದು ವಿಪರ್ಯಾಸ. ಇನ್ನಾದರೂ ಮುಖ್ಯಮಂತ್ರಿಗಳು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿ ಸಿಕೊಂಡು ಬಜೆಟ್‌ ಮೇಲಣ ಚರ್ಚೆಗೆ ಉತ್ತರ ಕೊಡುವಾಗ ಈ ಅಸಮತೋಲನ ಸರಿಪಡಿಸಬೇಕಿದೆ. ಅದೇ ಪ್ರಬುದ್ಧ ನಡವಳಿಕೆ. ಒಂದು ಅಭಿವೃದ್ಧಿ ಪರ ಸರಕಾರ ಮತ್ತು ಜನಪ್ರತಿನಿಧಿಗೆ  ತಾನಿಟ್ಟುಕೊಳ್ಳುವುದಕ್ಕಿಂತ ಉಳಿದವರಿಗೆ ಎಷ್ಟು ಕೊಡುತ್ತಾನೆ ಎಂಬುದೇ ಮಾದರಿ. ಅದೇ ನಿಯಮ ಮುಖ್ಯಮಂತ್ರಿಗೂ ಅನ್ವಯವಾದರೆ ಮಾತ್ರ ಅಭಿವೃದ್ಧಿ ಎಂಬುದು  ಸ್ಪಷ್ಟ. 

Advertisement

Udayavani is now on Telegram. Click here to join our channel and stay updated with the latest news.

Next