ಬೆಂಗಳೂರು: ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಕಾವೇರಿ ಹ್ಯಾಂಡ್‌ಲೂಮ್ಸ್ ವಿಲೀನಗೊಳಿಸುವ ಸಂಬಂಧ ಸಮಿತಿ ರಚಿಸಿದ್ದು, ವರದಿ ಬಂದ ಅನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಮಂಗಳವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಕೆ. ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿ ಅವರು, ರಾಜ್ಯದಲ್ಲಿ ಸಾರ್ವಜನಿಕ ಉದ್ದಿಮೆಗಳ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 60 ಸಾರ್ವಜನಿಕ ವಲಯದ ಉದ್ದಿಮೆಗಳ ನಿಗಮ, ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 34 ಲಾಭದಲ್ಲಿವೆ. ಇದರಲ್ಲಿ 21 ಹಾಗೂ 5 ಸೇವಾವಲಯದಲ್ಲಿರುವ ನಿಗಮ ಮಂಡಳಿಗಳಾಗಿವೆ ಎಂದರು.
ಸಾರ್ವಜನಿಕ ಉದ್ಯಮಗಳ ಸಮಿತಿ ಪ್ರಾರಂಭಿಕ ಸಭೆಯ ಶಿಫಾರಸು ಮೇರೆಗೆ ಕಾವೇರಿ ಹ್ಯಾಂಡ್‌ಲೂಮ್ಸ್ ಸೇರಿ ಮೂರು ನಿಗಮಗಳ ವಿಲೀನಗೊಳಿಸುವ ಸಂಬಂಧ ಜವಳಿ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯು ಸಾಧಕ-ಬಾಧಕಗಳನ್ನು ಒಳಗೊಂಡ ವರದಿ ಸಲ್ಲಿಸಲಿದ್ದು, ಅದನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
2,289 ಕೋಟಿ ತೆರಿಗೆ ಸಂಗ್ರಹ
ಸದಸ್ಯ ಡಾ| ಕೆ. ಗೋವಿಂದ್ ರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 2018-19ರಲ್ಲಿ 711.88 ಕೋಟಿ ರೂ., 2019-20ರಲ್ಲಿ 736.77 ಕೋಟಿ ರೂ., 2020-21ರಲ್ಲಿ 841.72 ಕೋಟಿ ರೂ ಸೇರಿದಂತೆ ಒಟ್ಟು 2,289 .64 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಪುರಸಭೆಯ ಅಧಿ ನಿಯಮ 1964 ಕಲಂ 101 ಮತ್ತು 102 ಹಾಗೂ ಕರ್ನಾಟಕ ಪೌರನಿಗಮಗಳ ಅಧಿನಿಯಮ 1976ರ ಕಲಂ 108 ಹಾಗೂ 109ರಡಿ ಆಸ್ತಿ ತೆರಿಗೆ ನಿರ್ಧರಣೆಗೆ ಮಾನದಂಡಗಳನ್ನು ವಿವರಿಸಲಾಗಿದೆ ಎಂದರು.