ಹುಬ್ಬಳ್ಳಿ: ನಗರದ ಕೇಶ್ವಾಪುರ ಸುಳ್ಳ ರಸ್ತೆ ಬಳಿ ನಿರ್ಮಾಣ ಹಂತದ ಅಕ್ರಮ ಕಟ್ಟಡವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು. ತೆರವುಗೊಳಿಸಿದ ಕಟ್ಟಡ ಮಂಜುನಾಥ ಎಚ್. ಮ್ಯಾಗೇರಿ ಎಂಬುವವರಿಗೆ ಸೇರಿದ್ದಾಗಿದೆ.
ಬೆಳಿಗ್ಗೆ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಜೆಸಿಬಿ ಯಂತ್ರ ಹಾಗೂ ಕಾರ್ಮಿಕರ ಸಹಕಾರದೊಂದಿಗೆ ಪೊಲೀಸ್ ಬಂದೋಬಸ್ತ್ನಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ವಿರೋಧ ವ್ಯಕ್ತಪಡಿಸುತ್ತಿದ್ದವರನ್ನು ಕಾರ್ಯಾಚರಣೆ ಸ್ಥಳದಿಂದ ದೂರ ಸರಿಸಿ, ಕಾರ್ಯಾಚರಣೆ ಅನುವು ಮಾಡಿದರು.
ಈ ನಿರ್ಮಾಣ ಹಂತದ ಕಟ್ಟಡದಲ್ಲಿ ಖಾಸಗಿ ಶಾಲೆ ಆರಂಭಿಸಲಾಗುತ್ತಿತ್ತು ಎನ್ನಲಾಗಿದೆ. ಕಟ್ಟಡವನ್ನು ಸರಕಾರಿ ಜಾಗೆಯಲ್ಲಿ ನಿರ್ಮಿಸಲಾಗುತ್ತಿತ್ತು. ಈ ಕಾಮಗಾರಿ ಸ್ಥಗಿತಗೊಳಿಸುವಂತೆ ಕಟ್ಟಡದ ಮಾಲಕರಿಗೆ ಪಾಲಿಕೆಯು ಮೂರು ತಿಂಗಳ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು.
ಆದರೂ ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರಿಸಿದ್ದರು. ಹೀಗಾಗಿ ನಿರ್ಮಾಣ ಹಂತದ ಕಟ್ಟಡ ತೆರವುಗೊಳಿಸಬೇಕಾಯಿತು ಎಂದು ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು. ಹನುಮಂತಪ್ಪ ಮ್ಯಾಗೇರಿ ಮಾತನಾಡಿ, ರಸ್ತೆಗಾಗಿ ಜಮೀನು ಬಿಟ್ಟು ಕೊಡುವುದಾಗಿ ಹೇಳಿದ್ದರೂ ಪಾಲಿಕೆಯವರು ಕಟ್ಟಡ ತೆರವುಗೊಳಿಸುತ್ತಿದ್ದಾರೆ.
ನಾವು ನಿರ್ಮಿಸಲಾಗುತ್ತಿರುವ ಕಟ್ಟಡ ಅಕ್ರಮವಾಗಿಲ್ಲ ಎಂದರು. ಹನುಮಂತಪ್ಪ ಮ್ಯಾಗೇರಿ ಅವರು ಕಟ್ಟಡ ತೆರವುಸ್ಥಗಿತಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದು ಕಾರ್ಯಾಚರಣೆಗೆ ತಡೆಯಾಜ್ಞೆ ವಿಧಿಸಿದೆ.