ಚೀನಾದಲ್ಲಿನ ಕೊರೊನಾ ವೈರಸ್ ಭೀತಿಗೆ ಅಕ್ಷರಶಃ ಅಲ್ಲಿನ ಜನರು ದಿಕ್ಕೆಟ್ಟು ಕೂತಿದ್ದಾರೆ. ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಾಗುತ್ತಿಲ್ಲ. ಎಲ್ಲೆಲ್ಲೂ ಸಾಂಕ್ರಾಮಿಕ ಕಾಯಿಲೆಯದ್ದೇ ಮಾತು. ಇದರ ಭೀತಿ ಒಲಿಂಪಿಕ್ಸ್‌ಗೆ ತಯಾರಾಗುತ್ತಿರುವ ಚೀನಾದ ಕ್ರೀಡಾಪಟುಗಳಿಗೂ ಈಗ ತಟ್ಟಿದೆ. ಹೌದು, ಒಂದು ಕಡೆ ಅಲ್ಲಿ ಆಯೋಜನೆಗೊಳ್ಳಬೇಕಿದ್ದ ಒಲಿಂಪಿಕ್ಸ್‌ನ ಪ್ರಮುಖ ಅರ್ಹತಾ ಕೂಟಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದೆ. ಮತ್ತೂಂದು ಕಡೆ ಚೀನಾ ಅಥ್ಲೀಟ್‌ಗಳು ಬೇರೆ ರಾಷ್ಟ್ರಕ್ಕೆ ಹೋಗಿ ಸ್ಪರ್ಧೆ ಮಾಡುವುದು ಹೇಗೆ? ಎನ್ನುವ ಚಿಂತೆಯೂ ಕಾಡುತ್ತಿದೆ. ಹೌದು, ಚೀನಾದಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ, ವಿಶ್ವ ಆರೋಗ್ಯ ಸಂಸ್ಥೆ ಕೂಡ ತುರ್ತು ಪರಿಸ್ಥಿತಿ ಘೋಷಿಸಿದೆ. ಹೀಗೆಲ್ಲ ಇರುವಾಗ ಆ ರಾಷ್ಟ್ರದ ಅಥ್ಲೀಟ್‌ಗಳನ್ನು ಬೇರೆ ರಾಷ್ಟ್ರದ ಆತಿಥ್ಯದಲ್ಲಿ ನಡೆಸುವ ಕ್ರೀಡಾಕೂಟಕ್ಕೆ ಅನುಮತಿ ಕೊಡಿಸುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಗೊಂದಲ ಮೂಡುತ್ತಿದೆ. ಭಾರತ ಆತಿಥ್ಯದಲ್ಲಿ ಮುಂದೆ ಏಷ್ಯನ್ ಚಾಂಪಿಯನ್‌ಶಿಪ್ ನಡೆಯಲಿದೆ. ಚೀನಾ ಅಥ್ಲೀಟ್‌ಗಳು ಕೂಡ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರಿಗೂ ಭಾರತಕ್ಕೆ ಆಗಮಿಸಲು ಸರ್ಕಾರ ಅವಕಾಶ ನೀಡಲಿದೆ. ಈ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿಲ್ಲ ಎಂದು ಭಾರತೀಯ ಕುಸ್ತಿ ಒಕ್ಕೂಟ ತಿಳಿಸಿದೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಚೀನಾಕ್ಕೆ ಕೊರೊನಾದಿಂದಾಗಿ ಹೊಡೆತ ಬಿದ್ದರೂ ಅಚ್ಚರಿಯಿಲ್ಲ. ತನ್ನ ದೇಶದ ಜನರ ಜತೆ ಅಥ್ಲೀಟ್‌ಗಳ ಆರೋಗ್ಯವನ್ನೂ ಕಾಪಾಡುವ ಮಹತ್ವದ ಹೊಣೆ ಚೀನಾ ಸರ್ಕಾರದ ಮೇಲಿದೆ.