Advertisement

“ಕೊರೊನಾ ವೈರಸ್‌’ರಾಜ್ಯದಲ್ಲೂ ಮುನ್ನೆಚ್ಚರಿಕೆ

11:52 PM Jan 24, 2020 | Lakshmi GovindaRaj |

ಬೆಂಗಳೂರು: ಚೀನಾದಲ್ಲಿ “ಕೊರೊನಾ ವೈರಸ್‌’ ಹೆಚ್ಚಳವಾದ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

Advertisement

ಚೀನಾದಿಂದ ಯಾವುದೇ ಪ್ರಯಾಣಿಕರು ರಾಜ್ಯಕ್ಕೆ ಭೇಟಿ ನೀಡಿದಲ್ಲಿ ಹಾಗೂ ಚೀನಾಕ್ಕೆ ಪ್ರವಾಸ ಕೈಗೊಂಡು ಮರಳಿದ್ದಲ್ಲಿ, ಅವರಿಂದ ಸೋಂಕು ರಾಜ್ಯಕ್ಕೂ ವ್ಯಾಪಿಸಬಹುದು ಎಂದು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಅಂತಹ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ ಅವರ ಆರೋಗ್ಯದ ಮೇಲೆ ಕೆಲ ದಿನಗಳ ಕಾಲ ನಿಗಾ ಇಡಲಾಗುತ್ತಿದೆ.

ಶಂಕಿತರ ತಪಾಸಣೆ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಡಲಾಗಿದೆ. “ಕೊರೊನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ನಗರ ಪ್ರದೇಶ ಸೇರಿ ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.

ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮೂಗು ಸೋರುವಿಕೆ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಮಹಾನಗರಗಳಲ್ಲಿ ನ್ಯೂಮೋನಿಯಾ ಲಕ್ಷಣಗಳು ಕಂಡು ಬಂದವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವಿಮಾನ ನಿಲ್ದಾಣಗಳಲ್ಲಿ ನಿತ್ಯ ಪ್ರಯಾಣಿಕರ ತಪಾಸಣೆ ಸಹ ಮಾಡಲಾಗುತ್ತಿದ್ದು, ಈವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ’ ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next