Advertisement

ನಗರದ ವೈದ್ಯಕೀಯ ವಿದ್ಯಾರ್ಥಿಗೆ ಕೊರೊನಾ ವೈರಸ್‌ ಶಂಕೆ

09:46 PM Feb 05, 2020 | Lakshmi GovindaRaj |

ತುಮಕೂರು: ವಿಶ್ವದಲ್ಲಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ ಈಗ ನಗರಕ್ಕೆ ಬಂದಿರುವ ಆತಂಕ ಮೂಡಿದ್ದು, ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ನಗರದ ವಿದ್ಯಾರ್ಥಿಗೆ ಸೋಂಕು ತಗುಲಿರಬಹುದು ಎಂಬ ಶಂಕೆ ಜನರಲ್ಲಿ ಭೀತಿ ಮೂಡಿಸಿದೆ.

Advertisement

ಚೀನಾದ ವುಹಾನ್‌ ನಗರದಿಂದ 700 ಕಿ.ಮೀ ದೂರದಲ್ಲಿನ ಹ್ಯಾಂಗೂ ನಗರದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ತುಮಕೂರು ನಗರದ ಹನುಮಂತಪುರದ ವಿದ್ಯಾರ್ಥಿ 10 ದಿನದ ಹಿಂದೆ ನಗರಕ್ಕೆ ಮರಳಿದ್ದು, ಕೆಮ್ಮಿನಿಂದ ಬಳುತ್ತಿದ್ದ ವಿದ್ಯಾರ್ಥಿಗೆ ಜಿಲ್ಲಾಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಲು ಆರಂಭಿಸಿದ್ದಾರೆ. ತುಮಕೂರಿಗೆ ವಾಪಸಾಗಿರುವ ವಿದ್ಯಾರ್ಥಿ ಮೇಲೆ ಆರೋಗ್ಯ ಇಲಾಖೆಯ ವಿಶೇಷ ವೈದ್ಯಕೀಯ ತಂಡ ನಿಗಾವಹಿಸಿದೆ. ಕಫ‌, ರಕ್ತ ಮಾದರಿ ಬೆಂಗಳೂರಿಗೆ ರವಾನಿಸಿ ರಕ್ತ ಪರೀಕ್ಷೆ ವರದಿಗೆ ಕಾಯುತ್ತಿದ್ದಾರೆ.

ವೈದ್ಯರ ನಿಗಾ: ವಿದ್ಯಾರ್ಥಿಗೆ ಮನೆಯಿಂದ ಹೊರಗೆ ಬರದಂತೆ, ಜನರೊಂದಿಗೆ ಬೆರೆಯದಂತೆ, 28 ದಿನ ಹೊರಗೆ ಓಡಾಡದಂತೆ ಜನರೊಂದಿಗೆ ಮಾತನಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ವೈದ್ಯರು, ಆತನನ್ನು ಮನೆಯಲ್ಲೇ ಪ್ರತ್ಯೇಕ ರೂಮಿನಲ್ಲಿರಿಸಿದ್ದಾರೆ ಎನ್ನಲಾಗಿದೆ. ವುಹಾನ್‌ನಲ್ಲಿ ವೈರಸ್‌ ಕಂಡು ಬಂದ ತಕ್ಷಣ ತುಮಕೂರಿಗೆ ವಾಪಸ್‌ ಬಂದಿರುವ ತುಮಕೂರು ಮೂಲದ ವಿದ್ಯಾರ್ಥಿ 3 ವರ್ಷದದಿಂದ ಚೀನಾದಲ್ಲಿ ಮೆಡಿಕಲ್‌ ಓದುತ್ತಿದ್ದ ಎನ್ನಲಾಗಿದೆ.

ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸಾ ಘಟಕ ತೆರೆಯಲು ಕ್ರಮ ಕೈಗೊಂಡಿದ್ದಾರೆ. ಪ್ರತ್ಯೇಕ 5 ಹಾಸಿಗೆಗಳು ಹಾಗೂ 1 ವೆಂಟಿಲೇಟರ್‌ ಮೀಸಲಿಟ್ಟಿದ್ದು, ಅಗತ್ಯ ಔಷಧಿ ದಾಸ್ತಾನು ಮಾಡಲಾಗಿದೆ. ಜನಸಾಮಾನ್ಯರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಐಇಸಿ ಮಾಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ ತಿಳಿಸಿದ್ದಾರೆ.

ಈ ವೈರಸ್‌ ಪ್ರಾಣಿಗಳಲ್ಲಿ ಕಂಡು ಬರುತಿತ್ತು. ಆದರೆ ಪ್ರಾಣಿ ಹಾಗೂ ಮನುಷ್ಯರಿಗೂ ಹರಡುತ್ತಿದ್ದು, ಅನಾರೋಗ್ಯ ಪೀಡಿತ ವ್ಯಕ್ತಿ ಕೆಮ್ಮಿದರೆ, ಸೀನಿದರೆ ಇನ್ನೊಬ್ಬರಿಗೆ ಹರಡುತ್ತದೆ. ರೋಗ ಲಕ್ಷಣ ಪ್ರಾರಂಭದಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಬೇಧಿ ಕಾಣಿಸಿಕೊಳ್ಳುತ್ತದೆ. ಸೋಂಕು ಹರಡಂತೆ ತಡೆಯಲು ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯಬೇಕು.

Advertisement

ಕೈಗಳನ್ನು ಆಗಾಗ್ಗೆ ಚೆನ್ನಾಗಿ ತೊಳೆದುಕೊಳ್ಳಬೇಕು. ಸರಳ ನೈರ್ಮಲ್ಯ ರೂಢಿಸಿಕೊಳ್ಳಬೇಕು. ಅನಾರೋಗ್ಯದಿಂದ ಇರುವವರಿಗೆ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಸಂಪರ್ಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ ಈವರೆಗೂ ಕೊರೊನಾ ವೈರಸ್‌ ಪ್ರಕರಣ ದೃಢಪಟ್ಟಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಚೀನಾದಿಂದ ಬಂದಿದ್ದ ಯುವಕನ ಕಫ‌ ಹಾಗೂ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಎನ್‌ಐವಿಗೆ ಕಳುಹಿಸಲಾಗಿದ್ದು, ಯುವಕ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗೆ ದಾಖಲಾಗಿಲ್ಲ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ.
-ಡಾ.ಬಿ.ಆರ್‌.ಚಂದ್ರಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ರಾಜ್ಯದಲ್ಲಿ ಒಟ್ಟು 47 ಮಂದಿ ಕರೋನಾ ಶಂಕಿತರ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಅವೆಲ್ಲವೂ ನೆಗೆಟಿವ್‌ ಆಗಿದೆ. ತುಮಕೂರಿನಲ್ಲಿ ಒಬ್ಬ ಶಂಕಿತ ಪತ್ತೆಯಾಗಿದ್ದು, ಅವರ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಲಿದೆ.
-ಬಿ.ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

* ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next