ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ದಾಳಿಗೆ ತುತ್ತಾಗಿರುವ ಚೀನಾದ ವುಹಾನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲಾಗಿದೆ. ಏರ್ ಇಂಡಿಯಾ ಬೋಯಿಂಗ್ 747 ವಿಮಾನದಲ್ಲಿ ಇಂದು ಮುಂಜಾನೆ 324 ಭಾರತೀಯರನ್ನು ಕರೆತರಲಾಗಿದೆ ಎಂದು ವರದಿ ತಿಳಿಸಿದೆ. ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಏರ್ ಇಂಡಿಯಾ ಪ್ಯಾರಾಮೆಡಿಕ್‌ನ ಐವರು ವೈದ್ಯರ ತಂಡ ಕೂಡ ಜೊತೆಗಿದ್ದು ಅಗತ್ಯವಾದ ಮುನ್ನೇಚ್ಚರಿಕೆ ತೆಗೆದುಕೊಳ್ಳಲಾಗಿದೆ.
ಏರ್ ಇಂಡಿಯಾ ವಿಮಾನವು ಶುಕ್ರವಾರ ವುಹಾನ್‌ಗೆ ತೆರಳಿತ್ತು. ವುಹಾನ್‌ನಿಂದ ಆಗಮಿಸಿರುವ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ನೇರವಾಗಿ ನಿಗಾ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅದಕ್ಕೆಂದೇ ಹರಿಯಾಣದ ಮನೇಸರ್‌ನಲ್ಲಿ ಸೇನೆಯ ವತಿಯಿಂದ ನಿಗಾ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿರುವ ತಜ್ಞ ವೈದ್ಯರ ತಂಡ ಹಾಗೂ ಸಿಬ್ಬಂದಿಯು ಈ ಎಲ್ಲ ವಿದ್ಯಾರ್ಥಿಗಳ ಮೇಲೆ ಸುಮಾರು 2 ವಾರಗಳ ಕಾಲ ನಿಗಾ ಇಡಲಿದೆ.
ಚೀನಾಕ್ಕೆ ತೆರಳಿದ್ದ ವಿಮಾನದ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಪ್ರಯಾಣಿಕರನ್ನೂ ಕೂಡ ಭಾರತೀಯ ವೈದ್ಯರು ಕೂಲಂಕುಷವಾಗಿ ಪರಿಶೀಲಿಸಲಿದ್ದು, ಚೀನಾಕ್ಕೆ ತೆರಳಲು ಮತ್ತೊಂದು ವಿಶೇಷ ವಿಮಾನಯಾನವೂ ಇಂದು ನಿಗದಿಯಾಗಿದೆ.
ವುಹಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ವಿಶೇಷ ವಿಮಾನ ಹಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಭಾರತ, ಚೀನಾ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದೆ. ಈ ಹಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ನಾವು ಚೀನಾ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇವೆ” ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.