ಹೊಸದಿಲ್ಲಿ: ಕೊರೊನಾ ಕಾಲದಲ್ಲಿ ದೇಶಾದ್ಯಂತ ದಿಗ್ಬಂಧನ ಹೇರಲಾಗಿತ್ತು. ಹತ್ತಿರಹತ್ತಿರ ಒಂದು ವರ್ಷ ಜನ ಮನೆಯಲ್ಲೇ ಬಂಧಿತರಾಗಿದ್ದರು. ಇದರಿಂದ ಆಗಿರುವ ಮಹತ್ವದ ಲಾಭವೆಂದರೆ ಗುಣಪಡಿಸಲಾಗದ ರೋಗ ಎಚ್‌ಐವಿ ಬಾಧಿತರ ಪ್ರಮಾಣದಲ್ಲಿ ಕುಸಿತವಾಗಿರುವುದು!
ಜನ ಮನೆಯಲ್ಲೇ ಬಂಧಿತರಾಗಿದ್ದರಿಂದ ಲೈಂಗಿಕ ತೃಷೆ ತೀರಿಸಿಕೊಳ್ಳಲು ಅಡ್ಡದಾರಿ ಹಿಡಿದಿಲ್ಲ. ಹೀಗಾಗಿ 2019-20ರಲ್ಲಿ 1.44 ಲಕ್ಷ ಮಂದಿ ಇದ್ದ ಎಚ್‌ಐವಿ ಪೀಡಿತರ ಸಂಖ್ಯೆ, 2020-21ರಲ್ಲಿ 85,268ಕ್ಕೆ ಕುಸಿದಿದೆ.
ಭಾರತದಲ್ಲಿ ಎಚ್‌ಐವಿ ಅಥವಾ ಏಡ್ಸ್ ಬಾಧಿತರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಭಾರೀ ಇಳಿಮುಖ ಕಂಡುಬಂದಿದೆ. 2011-12ರಲ್ಲಿ ಬಾಧಿತರ ಸಂಖ್ಯೆ 2.4 ಲಕ್ಷವಿತ್ತು. 2020-21ರಲ್ಲಿ ಈ 1 ಲಕ್ಷಕ್ಕಿಂತ ಕಡಿಮೆಯಾಗಿದೆ. ಇದು ಈ ರೋಗದಿಂದ ಭಾರತೀಯರು ಶಾಶ್ವತವಾಗಿ ಮುಕ್ತಿ ಪಡೆಯುವ ಭರವಸೆಯೊಂದನ್ನು ಹುಟ್ಟಿಸಿದೆ.
ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಎಂಬಾತ ಸಲ್ಲಿಸಿದ ಆರ್‌ಟಿಐ ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈಗ ಲಭಿಸಿರುವ ಅಂಕಿ ಸಂಖ್ಯೆಗಳ ಪ್ರಕಾರ, ದೇಶದಲ್ಲಿ ಗರಿಷ್ಠ ಎಚ್‌ಐವಿ ಸೋಂಕಿ ತರಿರುವುದು ಮಹಾರಾಷ್ಟ್ರದಲ್ಲಿ (10,498). ಆಂಧ್ರ ಪ್ರದೇಶ (9,521), ಕರ್ನಾಟಕ(8,947) ಅನಂತರದ ಎರಡು ಸ್ಥಾನಗಳಲ್ಲಿವೆ.
ವಾಸ್ತವವಾಗಿ 2020-21ರಲ್ಲಿ ಸೋಂಕಿತರ ಪ್ರಮಾಣ ಇನ್ನೂ ಕಡಿಮೆಯಾಗಬೇಕಿತ್ತು. ಆದರೆ ಈ ವೇಳೆ ಕೆಲವರು ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಎಚ್‌ಐವಿಗೆ ತುತ್ತಾಗಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ.