Advertisement

ಕೊರೊನಾ ಭೀತಿ: ಸಂಕಷ್ಟದಲ್ಲಿ ಕುಕ್ಕುಟ ಉದ್ಯಮ!

10:03 AM Feb 21, 2020 | mahesh |

ಮಂಗಳೂರು: ಕೋಳಿ ಮಾಂಸಕ್ಕೂ ಕೊರೊನಾ ವೈರಸ್‌ಗೂ ಸಂಬಂಧವಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಪಷ್ಟಪಡಿಸಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ರಾಜ್ಯದ ಕುಕ್ಕುಟೋದ್ಯಮವನ್ನು ಸಂಕಷ್ಟಕ್ಕೆ ತಳ್ಳಿವೆ. ಕೋಳಿ ಮಾಂಸ ಮತ್ತು ಕೊರೊನಾ ವೈರಸ್‌ಗೆ ಸಂಬಂಧ ಕಲ್ಪಿಸಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ವದಂತಿಯಿಂದಾಗಿ ಕೋಳಿ ಮಾಂಸ ಭಕ್ಷಣೆಯ ಪ್ರಮಾಣ ಶೇ. 10ರಷ್ಟು ಕಡಿಮೆಯಾಗಿದೆ ಎನ್ನುವುದು ಕೋಳಿ ಮಾಂಸ ವ್ಯಾಪಾರಿಗಳ ಹಾಗೂ ಸಾಕಾಣಿಕೆದಾರರ ಅಂದಾಜು.

Advertisement

ವದಂತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕರ್ನಾಟಕ ರಾಜ್ಯ ಕುಕ್ಕುಟ ರೈತರ ಹಾಗೂ ತಳಿ ಸಾಕಣೆದಾರರ ಸಂಘ (ಕೆಪಿಎಫ್‌ಬಿಐ) ಸತ್ಯ ಶೋಧನೆ ನಡೆಸಿದ್ದು, ಅದರಲ್ಲಿ ಹುರುಳಿಲ್ಲ ಎಂಬುದನ್ನು ಕಂಡುಕೊಂಡಿದೆ. ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ವಿಶ್ವಾದ್ಯಂತದ ವೈಜ್ಞಾನಿಕ ವರದಿಗಳನ್ನು ಆಧರಿಸಿ ಕೋಳಿಯಿಂದ ಕೊರೊನಾ ವೈರಸ್‌ ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ನಷ್ಟದ ವ್ಯಾಪಾರ
ಒಂದು ಅಂದಾಜಿನ ಪ್ರಕಾರ ಒಂದು ಕೆ.ಜಿ. ಕೋಳಿ ಮಾಂಸದ ಉತ್ಪಾದನಾ ವೆಚ್ಚ ಬೆಂಗಳೂರಿನಲ್ಲಿ 80 ರೂ. ಹಾಗೂ ಮಂಗಳೂರಿನಲ್ಲಿ 90 ರೂ. ತಗಲುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಉತ್ಪಾದಕರಿಗೆ ಸಿಗುವ ಮಾರಾಟ ಬೆಲೆ ಬೆಂಗಳೂರಿನಲ್ಲಿ 54 ರೂ. ಹಾಗೂ ಮಂಗಳೂರಿನಲ್ಲಿ 58 ರೂ. ಅಂದರೆ 25ರಿಂದ 30 ರೂ. ನಷ್ಟ. ಒಂದು ವಾರದ ಹಿಂದೆ ಬೆಲೆ ಇದಕ್ಕಿಂತ 5 ರೂ. ಕಡಿಮೆ ಇತ್ತು ಎನ್ನುತ್ತಾರೆ ದ.ಕ. ಜಿಲ್ಲಾ ಕೋಳಿ ಸಾಕಾಣಿಕೆದಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಅಡ್ಯಾರ್‌.

ಈ ಉದ್ಯಮದಲ್ಲಿ ಕೋಳಿ ಮಾಂಸದ ವ್ಯಾಪಾರ ಮಾಡುವವರಿಗೆ ನಷ್ಟ ಆಗುವುದಿಲ್ಲ. ಉತ್ಪಾದಕರಿಂದ ಖರೀದಿಸುವ ಕೋಳಿಗಳನ್ನು ಮಾಂಸ ಮಾಡಿ ಮಾರಾಟ ಮಾಡುವಾಗ ಲಾಭದ ಮಾರ್ಜಿನ್‌ ಇರಿಸಿಯೇ ಮಾರಾಟ ಮಾಡುತ್ತಾರೆ ಎಂದು ಕೋಳಿ ಸಾಕಾಣಿಕೆದಾರ ವೈ.ಬಿ. ಸುಂದರ್‌ ಹೇಳುತ್ತಾರೆ. ಬುಧವಾರ ಮಂಗಳೂರಿ ನಲ್ಲಿ ಕೋಳಿ ಮಾಂಸದ ಸಗಟು ಮಾರಾಟ ದರ 78- 80 ರೂ. ಇದ್ದು,
ಚಿಲ್ಲರೆ ಮಾರಾಟ 95 ರೂ. ಇತ್ತು. ಶೀತಲೀಕರಣ ವ್ಯವಸ್ಥೆಯಲ್ಲಿ ಶುಚಿಗೊ ಳಿಸಿದ ಮಾಂಸಕ್ಕೆ 145 ರೂ. ಇತ್ತು.

ಭಯ ಬೇಡ
ಕೊರೊನಾ ವೈರಸ್‌ ಹಾವುಗಳಿಂದ ಬಂದಿರುವ ಸಾಧ್ಯತೆ ಇದೆ ಎಂದು ಚೀನದ ಸಂಶೋಧಕರು ಉಲ್ಲೇಖೀಸಿ ದ್ದಾರೆ ಎಂದು ಕೆಪಿಎಫ್‌ಬಿಐ ಅಧ್ಯಕ್ಷ ಡಾ| ಸುಶಾಂತ್‌ ರೈ ಬಿ. ಉದಯ ವಾಣಿಗೆ ತಿಳಿಸಿದ್ದು, ಮಾಂಸಪ್ರಿಯರು ಭಯ ಪಡುವುದು ಬೇಡ ಎಂದಿದ್ದಾರೆ.

Advertisement

ಈ ವರ್ಷವಿಡೀ ನಷ್ಟ
ಈ ವರ್ಷ ಒಂದು ತಿಂಗಳಲ್ಲಿಯೂ ಕೋಳಿ ಸಾಕಾಣಿಕೆದಾರರಿಗೆ ಲಾಭ ಬಂದಿಲ್ಲ. ಮೊದಲ 6 ತಿಂಗಳಲ್ಲಿ ಪ್ರಕೃತಿ ವಿಕೋಪ ಮತ್ತಿತರ ಕಾರಣಗಳಿಂದ ಆಹಾರ ವಸ್ತು ಸರಿಯಾಗಿ ಸಿಗದೆ ನಷ್ಟವಾಗಿತ್ತು. ಅನಂತರದ 3 ತಿಂಗಳು ಲಾಭ-ನಷ್ಟ ಎರಡೂ ಇಲ್ಲದೆ ಉದ್ಯಮ ನಡೆದಿತ್ತು. ಇದೀಗ ಸುಳ್ಳು ಸುದ್ದಿಯಿಂದಾಗಿ ನಷ್ಟವೇ ಆಗುತ್ತಿದೆ. ಬ್ಯಾಂಕ್‌ ಸಾಲ ಪಡೆದು ಉದ್ಯಮ ಆರಂಭಿಸಿದವರು ಸಂಕಷ್ಟದಲ್ಲಿದ್ದಾರೆ. ಸರಕಾರ ಈ ಉದ್ಯಮಕ್ಕೆ ಸಬ್ಸಿಡಿ ಒದಗಿಸಿ ನೆರವಾಗಬೇಕು ಎಂದು ಕೋಳಿ ಸಾಕಾಣಿಕೆದಾರ ವೈ.ಬಿ. ಸುಂದರ್‌ ಆಗ್ರಹಿಸಿದ್ದಾರೆ.

ಯಾವುದೇ ರೋಗಾಣುಗಳಿದ್ದರೂ ಮಾಂಸ ಅಥವಾ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿದಾಗ ಉಳಿಯುವುದಿಲ್ಲ. ಯಾವುದೇ ಭಯ ಪಡುವ ಅಗತ್ಯವಿಲ್ಲ.
– ದಯಾನಂದ ಅಡ್ಯಾರ್‌, ದ.ಕ. ಜಿಲ್ಲಾ ಕೋಳಿ ಸಾಕಾಣಿಕೆದಾರರ ವಿವಿಧೋದ್ದೇಶ ಸ. ಸಂಘದ ಅಧ್ಯಕ್ಷ

– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next