Advertisement

ತರಕಾರಿ ಮಾರುಕಟ್ಟೆ ಮೇಲೂ ಕರಿನೆರಳು

12:42 AM Mar 15, 2020 | Lakshmi GovindaRaj |

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ನಗರದ ಮಾರುಕಟ್ಟೆಗಳಲ್ಲಿ ಸಾರ್ವಜನಿಕರ ಓಡಾಟ ಕಡಿಮೆಯಾಗಿದ್ದು, ಹಣ್ಣುಗಳು, ತರಕಾರಿಗಳ ದರ ಕುಸಿದಿದೆ. ಯಶವಂತಪುರ, ಕೆ.ಆರ್‌.ಮಾರುಕಟ್ಟೆ, ವಿಜಯನಗರ, ಮಲ್ಲೇಶ್ವರ, ಶಿವಾಜಿನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನರ ಓಡಾಟ ಕಡಿಮೆಯಾಗಿದ್ದು, ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

Advertisement

ಕೊರೊನಾ ಆತಂಕ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮಗಳು, ಸಮಾವೇಶಗಳು ಕಡಿಮೆಯಾಗಿರುವುದರಿಂದ ನೇರ ಪರಿಣಾಮ ಮಾರುಕಟ್ಟೆ ಮೇಲೆ ಬಿದ್ದಿದ್ದು, ಇದರಿಂದಾಗಿ ಟೊಮೇಟೊ, ಹಸಿ ಮೆಣಸಿನಕಾಯಿ, ಕ್ಯಾರೆಟ್‌, ಈರುಳ್ಳಿ, ಆಲೂಗಡ್ಡೆ, ಅವರೇಕಾಯಿ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇ. 20ರಷ್ಟು ಬೆಲೆ ಕುಸಿದಿದ್ದು ಸಗಟು ವ್ಯಾಪಾರಸ್ಥರು, ರೈತರು ಕಂಗಾಲಾಗಿದ್ದಾರೆ.

ತಿಂಗಳ ಹಿಂದೆ 100 ರೂ. ಗಡಿ ಇದ್ದ ಈರುಳ್ಳಿ 40 ರೂ., 30 ರೂ. ಇದ್ದ ಟೊಮೊಟೊ 10 ರೂ., 60 ರೂ. ಇದ್ದ ಅಲಸಂದಿಕಾಯಿ 40 ರೂ., ಗೆ ಇಳಿಕೆಯಾಗಿದ್ದು, ಹಣ್ಣುಗಳ ಬೆಲೆಯಲ್ಲಿಯೂ ವ್ಯತ್ಯಾಸವಾಗಿದೆ. ಮಾರ್ಚ್‌, ಏಪ್ರಿಲ್‌ ತಿಂಗಳು ಮದುವೆ ಸೀಸನ್‌ ಆಗಿದ್ದು, ಇದೇ ಸಮಯದಲ್ಲಿ ಹೆಚ್ಚಾಗಿ ತರಕಾರಿ ಮಾರುಕಟ್ಟೆಗೆ ಬರಲಿವೆ.

ಆದರೆ, ಕೊರೊನಾ ಭೀತಿಯಿಂದ ಆಡಂಬರ ಮದುವೆಗಳಿಗೆ ಬ್ರೇಕ್‌ ಬಿದ್ದಿದ್ದು, ದರ ಕುಸಿತಕ್ಕೂ ಕಾರಣವಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಮಾರುಕಟ್ಟೆಗೆ ಶೇ.10ರಷ್ಟು ತರಕಾರಿ ಹೆಚ್ಚಿಗೆ ಬರುತ್ತಿದ್ದು, ಕೊಂಡುಕೊಳ್ಳುವವರೇ ಇಲ್ಲ ದಂತಾಗಿದ್ದಾರೆ ಎಂದು ಕೆ.ಆರ್‌.ಮಾರುಕಟ್ಟೆ ವ್ಯಾಪಾರಿ ಮಹೇಶ್‌ ತಿಳಿಸಿದರು.

ಕಾಣದ ಮಾಸ್ಕ್ ಬಳಕೆ: ಮಾರುಕಟ್ಟೆ ಸಾರ್ವಜನಿಕ ಸ್ಥಳವಾಗಿದ್ದು, ಸಾವಿರಾರು ಜನರು ಓಡಾಡಿ ತರಕಾರಿ, ಹಣ್ಣು ಕೊಂಡೊಯ್ಯುತ್ತಾರೆ. ಪ್ರತಿಯೊಬ್ಬರು ಮಾಸ್ಕ್ ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ತಿಳಿಸಿ ದ್ದರೂ, ಮಾರುಕಟ್ಟೆಯಲ್ಲಿ ಬಹುತೇಕ ವ್ಯಾಪಾರಸ್ಥರು ಮಾಸ್ಕ್ಗಳನ್ನು ಧರಿಸದಿರುವುದು. ಸ್ವಚ್ಛತೆ ಕಾಪಾಡಿಕೊಳ್ಳದಿ ರುವುದು ಶನಿವಾರ ಕೆ.ಆರ್‌.ಮಾರುಕಟ್ಟೆಯಲ್ಲಿ ಕಂಡು ಬಂತು.

Advertisement

ಯಾವ ತರಕಾರಿಗೆ ಎಷ್ಟು ಬೆಲೆ?
ತರಕಾರಿ ಬೆಲೆ (ಕೆ.ಜಿ)
ಟೊಮೇಟೊ 10-15ರೂ.
ಹಸಿಮೆಣಸಿನಕಾಯಿ 20-25ರೂ.
ಅವರೇಕಾಯಿ 30-40ರೂ.
ಈರುಳ್ಳಿ 40 -50ರೂ.
ಅಲಸಂದಿಕಾಯಿ 30-35ರೂ.
ಕ್ಯಾರೆಟ್‌ 20-30ರೂ.
ಬೀನ್ಸ್‌ 30-40ರೂ.

ಯಾವ ಹಣ್ಣಿಗೆ ಎಷ್ಟು ಬೆಲೆ?
ಹಣ್ಣುಗಳು ಬೆಲೆ (ಕೆ.ಜಿ)
ಸೇಬು 80-100
ದ್ರಾಕ್ಷಿ 70-80
ದಾಳಿಂಬೆ 120-140
ಕಿತ್ತಾಳೆ 50-60
ಸಪೋಟ 40-50
ಮೂಸಂಬಿ 70-80

ಕಳೆದ ವಾರ ವ್ಯಾಪಾರ ಉತ್ತಮವಾಗಿತ್ತು. ಆದರೀಗ ಬಾರಿ ಕುಸಿತ ಕಂಡಿದೆ. ಮದುವೆಗಳು ನಡೆಸದಂತೆ ಸೂಚನೆ ನೀಡಿದ್ದು, ತರಕಾರಿ ಮಾರಾಟವಾಗುತ್ತಿಲ್ಲ. ಕೊರೊನಾದಿಂದ ಜನರು ಇತ್ತ ತಲೆ ಹಾಕುತ್ತಿಲ್ಲ. ಆವಕ ಹೆಚ್ಚಿದ್ದು, ಬೇಡಿಕೆಯಿಲ್ಲದಂತಾಗಿದೆ.
-ಫ‌ಯಾಜ್‌, ವ್ಯಾಪಾರಿ

ಗುಂಪು ಗುಂಪಾಗಿ ಜನರು ಸೇರಬಾರದು ಎಂದು ಸರ್ಕಾರ ತಿಳಿಸಿದ್ದು, ಮಾರುಕಟ್ಟೆಗಳಿಗೆ ಜನರು ಬರುವುದೇ ಕಡಿಮೆಯಾಗಿದೆ. ಈ ಮೊದಲು ಕೆ.ಆರ್‌.ಮಾರುಕಟ್ಟೆಯಲ್ಲಿ ಓಡಾಟ ನಡೆಸಲು ಜಾಗವೇ ಇರುತ್ತಿರಲಿಲ್ಲ. ಇಂದು ರಸ್ತೆಗಳು ಖಾಲಿ ಖಾಲಿ ಇವೆ.
-ಬಿಲಾಲ್‌ ಬಾಷಾ, ವ್ಯಾಪಾರಿ

ಕೊರೊನಾ ವೈರಸ್‌ ಸೋಂಕು ಹಿನ್ನಲೆ ವ್ಯಾಪಾರ ಕುಸಿದಿದೆ. ಒಂದೇ ದಿನಕ್ಕೆ ಕಂಗಾಲಾಗಿದ್ದೇವೆ. ಹೀಗೆ ಮುಂದುವರಿದರೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರಗಳು ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ನಾವು ಅತಂತ್ರವಾಗುತ್ತೇವೆ.
-ಅಕ್ಬರ್, ಹಣ್ಣಿನ ವ್ಯಾಪಾರಿ

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next