ದುಬೈ: ಕೊರೊನಾ ವೈರಸ್ ಅಟ್ಟಹಾಸಕ್ಕೆ ವಿಶ್ವಾದ್ಯಂತ 2,933 ಮಂದಿ ಮೃತಪಟ್ಟಿದ್ದಾರೆ. ಜನವರಿಯಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೊನಾ ಭೀತಿ ಎದುರಾಗಿತ್ತು. ಏಕಾಏಕಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಈಗ ಚೀನವೊಂದರಲ್ಲೇ ಸಾವಿನ ಸಂಖ್ಯೆ 3,000ದ ಗಡಿ ಸಮೀಪಿಸಿದೆ.
ಕೊರೊನಾ ಅಥವ ಕೋವಿಡ್ 19 ಎಂದು ಕರೆಯಲ್ಪಡುವ ಈ ವೈರಸ್ ಇಂದು ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಈ ಮಹಾಮಾರಿಯ ಪ್ರವೇಶವನ್ನು ತಡೆಯಲು ಶ್ರಮಿಸುತ್ತಿವೆ. ಇದಕ್ಕೆ ಪೂರಕವಾಗಿ ದುಬೈನ ಎಲ್ಲಾ ಶಾಲೆಗಳಿಗೆ ಸ್ಥಳೀಯ ಆಡಳಿತ ಯಾವುದೇ ಪ್ರವಾಸವನ್ನು ಹಮ್ಮಿಕೊಳ್ಳದಂತೆ ತಾಕೀತು ಮಾಡಿದೆ.
ಮಾತ್ರವಲ್ಲದೇ ದೂರದೂರುಗಳಿಗೆ ತೆರಳಿ ಅಲ್ಲಿನ ಸ್ಥಳೀಯರೊಂದಿಗೆ ಮಿಂಗಲ್ ಆಗುವುದು, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ತನ್ನ ಆದೇಶದಲ್ಲಿ ಶಾಲೆಗಳಲ್ಲಿ ಹಬ್ಬಗಳು ಆಚರಣೆಗಳನ್ನು ನಡೆಸುವುದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಏರ್ಪಡಿಸಿ ಬೇರೆ ಶಾಲಾ ಮಕ್ಕಳನ್ನು ಭಾಗವಹಿಸುವಂತೆ ಮಾಡುವುದನ್ನೂ ತಡೆ ಹಿಡಿದಿದೆ.
ಕೊರೊನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಬಹುಬೇಗ ವರ್ಗಾವಣೆಯಾಗುತ್ತದೆ.ಸೋಂಕು ತಗುಲಿದ ವ್ಯಕ್ತಿ ಕೆಮ್ಮಿದರೆ ವೈರಸ್ ಗಾಳಿಯ ಮೂಲಕ ಬಂದು ಮತ್ತೋರ್ವ ವ್ಯಕ್ತಿಗೆ ಸೇರುತ್ತದೆ. ಬಳಿಕ ಸೋಂಕು ಒಂದು ವ್ಯಕ್ತಿಯ ದೇಹ ಪ್ರವೇಶಿಸಿ ಆತನಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಂಡು ಒಣ ಕೆಮ್ಮು ಆರಂಭವಾಗುತ್ತದೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಬಳಿಕ ಕ್ರಮೇಣ ಸಾವು ಸಂಭವಿಸುತ್ತದೆ. ಇದಕ್ಕೆ ಔಷಧ ಕಂಡುಹಿಡಿಯಲು ಹಲವು ರಾಷ್ಟ್ರಗಳು ಸಂಶೋಧನೆ ಆರಂಭಿಸಿವೆ.