ಧಾರವಾಡ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್-19 (ಕೊರೊನಾ) ಪ್ರಕರಣಗಳು ಪತ್ತೆಯಾಗಿಲ್ಲ. ಸಾರ್ವಜನಿಕರು ಅನಗತ್ಯವಾಗಿ ಭಯಭೀತರಾಗಬಾರದು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಡಿಸಿ ಕಚೇರಿಯಲ್ಲಿ ಸಭಾಂಗಣದಲ್ಲಿ ಸಂಜೆ ನಡೆದ ಸರ್ಕಾರಿ ವೈದ್ಯಾಧಿಕಾರಿಗಳು, ಹೋಟೆಲ್ ಮಾಲೀಕರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಮುಂಜಾಗೃತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೈಗಳನ್ನು ಪದೇ ಪದೇ ತೊಳೆದುಕೊಳ್ಳುತ್ತ, ಶುಚಿಯಾದ ಆಹಾರ, ಕುಡಿಯುವ ನೀರು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವವರು ಮತ್ತು ಅವರ ಸಂಪರ್ಕದಲ್ಲಿರುವವರು ಮಾತ್ರ ಮುಖಕ್ಕೆ ಮಾಸ್ಕ್ ಧರಿಸಬೇಕು. ಉಳಿದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದರು.
ಕೋವಿಡ್-19 (ಕೊರೊನಾ) ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಮುಖ್ಯವಾಗಿ ಚೀನಾ, ಹಾಂಗ್‌ಕಾಂಗ್, ಕೋರಿಯಾ ಗಣರಾಜ್ಯ, ಜಪಾನ್, ಇಟಲಿ, ಥೈಲ್ಯಾಂಡ್, ಸಿಂಗಪುರ್, ಇರಾನ್, ಮಲೇಶಿಯಾ, ಫ್ರಾನ್ಸ್, ಸ್ಪೇನ್ ಹಾಗೂ ಜರ್ಮನಿ ಈ 12 ದೇಶಗಳಿಂದ ಬರುವ ಪ್ರವಾಸಿಗರನ್ನು ನಿಯಮಾನುಸಾರ ತಪಾಸಣೆಗೊಳಪಡಿಸಿ 14 ರಿಂದ 28 ದಿನಗಳ ಕಾಲ ವೈದ್ಯರ ನಿಗಾವಣೆಯಲ್ಲಿಡಬೇಕು ಎಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಪ್ರವಾಸಿ ತಾಣಗಳು ಇಲ್ಲವಾದರೂ ಹಂಪಿ, ಬಾದಾಮಿ, ವಿಜಯಪುರ ಮತ್ತಿತರ ಸ್ಥಳಗಳಿಗೆ ಬರುವ ಪ್ರವಾಸಿಗರು ಹುಬ್ಬಳ್ಳಿ-ಧಾರವಾಡದ ಪ್ರಮುಖ ಹೋಟೆಲ್‌ಗಳಲ್ಲಿ ತಂಗುವ ಸಾಧ್ಯತೆಗಳಿರುತ್ತವೆ. ಅಂತಹ ಪ್ರವಾಸಿಗರನ್ನು ಎಚ್ಚರಿಕೆಯಿಂದ ಸರ್ಕಾರದ ನಿರ್ದೇಶನ ಹಾಗೂ ಮಾರ್ಗದರ್ಶಿ ಸೂಚನೆಗಳಂತೆ ತಪಾಸಣೆಗೆ ಒಳಪಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಡಿಎಚ್‌ಓ ಅವರ ಮೊಬೈಲ್ ಸಂಖ್ಯೆ: 9449843049, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಮೊಬೈಲ್ ಸಂಖ್ಯೆ: 9449843254 ಸಂಪರ್ಕಿಸಿ ಮಾಹಿತಿ ನೀಡಬೇಕು. ಅವರು ರೋಗ ಲಕ್ಷಣ ಹೊಂದಿರುವ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅವರು ಪರೀಕ್ಷೆಗೆ ಕಳುಹಿಸಿಕೊಡುತ್ತಾರೆ ಎಂದರು. ಜಿಪಂ ಸಿಇ0 ಡಾ| ಬಿ.ಸಿ. ಸತೀಶ ಮಾತನಾಡಿ, ಜನರು ಅಧಿಕ ಸಂಖ್ಯೆಯಲ್ಲಿ ಜಮಾವಣೆ ಆಗುವುದನ್ನು ಸಾಧ್ಯವಾದಷ್ಟು ಕೈಬಿಡಬೇಕು. ಧಾರ್ಮಿಕ ಕಾರಣಗಳಿಂದ ಅನಿವಾರ್ಯವಾಗಿ ಸೇರಲೇಬೇಕಾದ ಸಂದರ್ಭ ಇದ್ದರೆ ಸ್ವತ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಸೇರಿದಂತೆ ಯಾವುದೇ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ರೋಗ ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದರು.
ಪಾಲಿಕೆ ಆಯುಕ್ತ ಡಾ| ಸುರೇಶ್ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅ ಧೀಕ್ಷಕ ಡಾ| ಅರುಣಕುಮಾರ, ಡಿಎಚ್‌ಒ ಡಾ| ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಶಿವಕುಮಾರ ಮಾನಕರ, ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ರವಿ ಮೊದಲಾದವರಿದ್ದರು.