Advertisement

ಕೊರೊನಾ: 27ರಂದು ದೇಶಾದ್ಯಂತ ಆರೋಗ್ಯ ಕೇಂದ್ರಗಳಲ್ಲಿ ಮಾಕ್‌ ಡ್ರಿಲ್‌; ಆಸ್ಪತ್ರೆಗಳು ಸನ್ನದ್ಧ

10:09 PM Dec 23, 2022 | Team Udayavani |

ನವದೆಹಲಿ: ಕೊರೊನಾ ಸವಾಲನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂಬುದನ್ನು ದೃಢಪಡಿಸಲು ದೇಶಾದ್ಯಂತ ಡಿ.27ರಂದು(ಮಂಗಳವಾರ) ಎಲ್ಲ ಆಸ್ಪತ್ರೆಗಳಲ್ಲೂ “ಮಾಕ್‌ ಡ್ರಿಲ್‌'(ಅಣಕು ಪ್ರದರ್ಶನ) ನಡೆಯಲಿದೆ. ಆಕ್ಸಿಜನ್‌ ಘಟಕಗಳು, ವೆಂಟಿಲೇಟರ್‌ಗಳು, ಅಗತ್ಯ ಸಾಧನಗಳು ಮತ್ತು ಮಾನವ ಸಂಪನ್ಮೂಲಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳ ಲಭ್ಯತೆ ಹಾಗೂ ಸನ್ನದ್ಧತೆಯನ್ನು ಖಾತ್ರಿಪಡಿಸಲೆಂದು ಈ ಪ್ರಕ್ರಿಯೆ ನಡೆಸಲಾಗುತ್ತದೆ.

Advertisement

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಆರೋಗ್ಯ ಕೇಂದ್ರಗಳಲ್ಲೂ ಮಾಕ್‌ ಡ್ರಿಲ್‌ ನಡೆಯಲಿದೆ. ಪಾಸಿವಿಟ್‌ ಪ್ರಕರಣಗಳ ಸ್ಯಾಂಪಲ್‌ಗ‌ಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌(ವಂಶವಾಹಿ ಪರೀಕ್ಷೆ)ಗೆ ಕಳುಹಿಸಿಕೊಡುವಂತೆಯೂ ಕೇಂದ್ರ ಸೂಚಿಸಿದೆ. ಹೊಸ ರೂಪಾಂತರಿಯು ಬೇಗನೆ ಪತ್ತೆಯಾದರೆ, ಅದು ದೇಶದೆಲ್ಲೆಡೆ ವ್ಯಾಪಿಸುವುದನ್ನು ತಡೆಯಬಹುದು ಎಂದೂ ಸಲಹೆ ನೀಡಿದೆ.

ಜ.2ರವರೆಗೆ ನಿರ್ಬಂಧವಿಲ್ಲ
ಗೋವಾದಲ್ಲಿ ಜ.2ರವರೆಗೆ ಯಾವುದೇ ಕೊರೊನಾ ಸಂಬಂಧಿ ನಿರ್ಬಂಧಗಳನ್ನು ಹೇರುವುದಿಲ್ಲ ಎಂದು ಸಿಎಂ ಪ್ರಮೋದ್‌ ಸಾವಂತ್‌ ಘೋಷಿಸಿದ್ದಾರೆ. ಜ.3ರಂದು ನಾವು ಪರಿಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಆದರೆ, ಜನರೆಲ್ಲರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಚೀನಾಗೆ ಭಾರತದ ಔಷಧ
ಕೊರೊನಾದಿಂದ ಕಂಗೆಟ್ಟಿರುವ ಚೀನಾಗೆ ಜ್ವರದ ಔಷಧ ಪೂರೈಸಲು ಸಿದ್ಧ ಎಂದು ಭಾರತೀಯ ಔಷಧ ರಫ್ತು ಸಮಿತಿ ಹೇಳಿದೆ. ಇಬುಪ್ರೊಫೇನ್‌, ಪ್ಯಾರಾಸೆಟಮಾಲ್‌, ವೈರಲ್‌ ಟೆಸ್ಟ್‌ ಕಿಟ್‌ಗಳಿಗೆ ಚೀನಾದಲ್ಲಿ ಭಾರೀ ಬೇಡಿಕೆಯಿದೆ. ಅಗತ್ಯಬಿದ್ದರೆ ಅವುಗಳನ್ನು ಪೂರೈಸಲು ರೆಡಿ ಎಂದು ಸಮಿತಿಯ ಮುಖ್ಯಸ್ಥ ಸಾಹಿಲ್‌ ಮುಂಜಲ್‌ ಹೇಳಿದ್ದಾರೆ.

“ಹಳೇ ನಂಬರ್‌ ಈಗಲೂ ಆ್ಯಕ್ಟಿವ್‌ ಆಗಿದೆ’
ಕೊರೊನಾ ಸೋಂಕಿಗೆ ಸಂಬಂಧಿಸಿ ಹೊಸ ಸುದ್ದಿಗಳು ಹೊರಬೀಳುತ್ತಿರುವಂತೆಯೇ, “ಆಪತಾºಂಧವ’ ಸೋನು ಸೂದ್‌ ಅವರು ನೆರವಿಗೆ ಸಿದ್ಧ ಎಂದು ಘೋಷಿಸಿದ್ದಾರೆ. “ನನ್ನ ಹಳೆಯ ನಂಬರ್‌ ಈಗಲೂ ಸಕ್ರಿಯವಾಗಿದೆ. ಅಗತ್ಯವಿದ್ದರೆ ಖಂಡಿತಾ ಕರೆ ಮಾಡಿ’ ಎಂದಿದ್ದಾರೆ. ಈಗಾಗಲೇ ನಾನು ಕೋವಿಡ್‌ ಎಮರ್ಜೆನ್ಸಿಗೆ ಸಜ್ಜಾಗುವಂತೆ ದೇಶಾದ್ಯಂತ ನನ್ನ ತಂಡಕ್ಕೆ ಕರೆ ನೀಡಿದ್ದೇನೆ ಎಂದೂ ತಿಳಿಸಿದ್ದಾರೆ. ಈ ಹಿಂದೆ ಕೊರೊನಾ ಅಲೆಗಳು ಅಪ್ಪಳಿಸಿದಾಗಲೆಲ್ಲ ನಟ ಸೂದ್‌ ಅವರು ಜನರ ಸಹಾಯಕ್ಕೆ ಧಾವಿಸಿದ್ದರು.

Advertisement

ಸೆನ್ಸೆಕ್ಸ್‌ 981 ಅಂಕ ಪತನ!
ಜಾಗತಿಕವಾಗಿ ಕೊರೊನಾ ಸೋಂಕಿನ ಮತ್ತೂಂದು ಅಲೆ ಅಪ್ಪಳಿಸುವ ಭೀತಿಯು ಮುಂಬೈ ಷೇರು ಮಾರುಕಟ್ಟೆಯಲ್ಲೂ ಗೋಚರಿಸಿತು. ಕಳೆದ ಕೆಲ ದಿನಗಳಿಂದ ನಷ್ಟವನ್ನೇ ಅನುಭವಿಸಿದ ಮಾರುಕಟ್ಟೆ, ಮತ್ತೆ 60 ಸಾವಿರದ ಗಡಿಗಿಂತ ಕೆಳಗಿಳಿಯಿತು. ಹೂಡಿಕೆದಾರರು ಷೇರು ಮಾರಾಟದಲ್ಲೇ ಆಸಕ್ತಿ ತೋರಿದ ಕಾರಣ, ಶುಕ್ರವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 980.93 ಅಂಕ ಪತನಗೊಂಡು, ದಿನಾಂತ್ಯಕ್ಕೆ 59,845.29ಕ್ಕೆ ಕೊನೆಯಾಯಿತು. ನಿಫ್ಟಿ 320.55 ಅಂಕ ಕುಸಿದು, 17,806.80ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಹೀಗಾಗಿ, ಕಳೆದ 4 ದಿನಗಳಲ್ಲಿ ಹೂಡಿಕೆದಾರರ 15.77 ಲಕ್ಷ ಕೋಟಿ ರೂ. ಸಂಪತ್ತು ಕೊಚ್ಚಿ ಹೋದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next