Advertisement
ಕೊರೊನಾ ವಿರುದ್ಧ ಭಾರತ ದೊಡ್ಡ ಸಮರ ಸಾರಿದೆ. ಆದರೆ ಈ ಹೋರಾಟಕ್ಕೆ ಅನೇಕ ಅಡಚಣೆಗಳೂ ಇವೆ. ಹಾಗೆಂದು, ಬೃಹತ್ ಜನಸಂಖ್ಯೆ, ಆರೋಗ್ಯ ವಲಯದ ದುಸ್ಥಿತಿ, ಮೂಲಸೌಕರ್ಯಗಳ ಅಭಾವ ಇತ್ಯಾದಿ “ಪರಿಚಿತ’ ಅಡಚಣೆಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಈ ಪರಿಚಿತ ಅಡಚಣೆಗಳನ್ನು ಹೇಗೋ ದಾಟಿಬಿಡಬಹುದು. ಆದರೆ, ಈಗ ಎದುರಾಗಿರುವ “ಅಪರಿಚಿತ’ ನವ ಅಡಚಣೆಯೊಂದನ್ನು ಎದುರಿಸುವುದೇ ಸವಾಲಿನ ಕೆಲಸವಾಗಿಬಿಟ್ಟಿದೆ. “ತಪ್ಪು ಮಾಹಿತಿ’ ಮತ್ತು “ಸುಳ್ಳು ಸುದ್ದಿ’ಗಳ ಈ ಅಪರಿಚಿತ ಬೃಹತ್ ಅಡಚಣೆಯಿಂದ ಭಾರತೀಯರನ್ನು ಕಾಪಾಡುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ.
Related Articles
Advertisement
ವಾಟ್ಸಪ್ ಎಂಬ ಸುಳ್ಳು ಸುದ್ದಿಗಳ ಆಗರದೇಶದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ ಹಠಾತ್ತನೆ ಯಾವ ಪ್ರಮಾಣದಲ್ಲಿ ಅಧಿಕವಾಗಿಬಿಟ್ಟಿದೆಯೆಂದರೆ, ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟ ಮತ್ತಷ್ಟು ಕಠಿನವಾಗುತ್ತಲೇ ಸಾಗಿದೆ. ಅದರಲ್ಲೂ ಭಾರತದಲ್ಲಿ ವಾಟ್ಸಪ್ ಬಳಕೆದಾರರ ಸಂಖ್ಯೆಯಂತೂ ತಲೆತಿರುಗಿಸುವಂತಿದೆ. 46.8 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಿರುವ ನಮ್ಮ ರಾಷ್ಟ್ರದಲ್ಲಿ 40 ಕೋಟಿ ಜನರು ವಾಟ್ಸಪ್ ಬಳಸುತ್ತಾರೆ. ಸುಮ್ಮನೇ ಊಹಿಸಿ ನೋಡಿ, ಈ 40 ಕೋಟಿ ಜನರಲ್ಲಿ 20 ಕೋಟಿ ಜನರಿಗಾದರೂ ಕೊರೊನಾಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹೋಗಿರುತ್ತವೆ ತಾನೆ? ಅಂದರೆ, ಯಾವ ಪ್ರಮಾಣದಲ್ಲಿ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಯಾಗುತ್ತಿದೆಯೋ ಯೋಚಿಸಿ? ಇನ್ನೂ ಎಷ್ಟು ಕೋಟಿ ಜನರು ಸುದ್ದಿ ವಾಹಿನಿಗಳ ಉತ್ಪ್ರೇಕ್ಷಿತ ವರದಿಗಳಿಂದ ಬೆಚ್ಚಿ ಬೀಳುತ್ತಿಲ್ಲ? ಅಂದರೆ, ಮುಖ್ಯವಾಹಿನಿ ಮಾಧ್ಯಮಗಳು + ಸಾಮಾಜಿಕ ಮಾಧ್ಯಮಗಳು ಕೈ ಕೈ ಜೋಡಿಸಿ ಜನರನ್ನು ಹೆದರಿಸುವ ಕೆಲಸದಲ್ಲಿ ನಿರತವಾಗಿವೆ. ಸತ್ಯಶೋಧನಾ ಜಾಲತಾಣ ಬೂಮ್‌ನ ಸ್ಥಾಪಕಿ ಶಚಿ ಸುತಾರಿಯಾ ಅವರು “”ಸಾಮಾನ್ಯವಾಗಿ ಭಾರತದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ, ಈ ಪ್ರಮಾಣದಲ್ಲಿ ತಪ್ಪು ಮಾಹಿತಿಯನ್ನು ನಾವು ನೋಡಿರಲಿಲ್ಲ. ಹಿಂದೆಲ್ಲ, ಒಬ್ಬ ವ್ಯಕ್ತಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ವಾಟ್ಸಪ್‌ನಲ್ಲಿ ಸರಾಸರಿ ವಾರಕ್ಕೆ 3-4 ಸಂದೇಶಗಳು ಬರುತ್ತಿದ್ದವು. ಆದರೆ ಈಗ ದಿನಕ್ಕೆ ಸರಾಸರಿ 6-7 ಸಂದೇಶಗಳು ಹರಿದುಬರುತ್ತಿದ್ದು, ಬಹುತೇಕ ಕೊರೊನಾವೈರಸ್‌ಗೆ ಸಂಬಂಧಿಸಿರುತ್ತವೆ” ಎನ್ನುತ್ತಾರೆ
ಈ ಸುಳ್ಳು ಸುದ್ದಿಗಳು ಬೇಗ ಹರಡಲಿ ಎಂಬ ಕಾರಣಕ್ಕಾಗಿ, “”ಇದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ”, “”ಭಾರತ ಸರಕಾರದ ಆದೇಶ” ಎಂದು ಇವುಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಬ್‌ಸ್ಕ್ರೈಬರ್‌ಗಳ ಆಸೆಗಾಗಿ..
ಗಮನಿಸಬೇಕಾದ ಸಂಗತಿಯೆಂದರೆ, ಹೇಗೆ ಟಿ.ವಿ. ಚಾನೆಲ್‌ಗಳು ಟಿಆರ್‌ಪಿಗಾಗಿ ಭೀತಿಗೊಳಿಸುವ ವರದಿಗಳನ್ನು ಪ್ರಸಾರ ಮಾಡುತ್ತಿವೆಯೋ ಅದೇ ರೀತಿಯಲ್ಲೇ ಫೇಸ್‌ಬುಕ್, ಯೂಟ್ಯೂಬ್‌ನಲ್ಲಿನ ಖಾಸಗಿ ಪೇಜ್‌ಗಳು ಹೆಚ್ಚು ಸಬ್‌ಸ್ಕೈಬರ್ಸ್‌ಗಳನ್ನು ಪಡೆಯುವುದಕ್ಕಾಗಿಯೂ ಸುಳ್ಳು ಸುದ್ದಿ ಹರಿಬಿಡುತ್ತವೆ. ಈಗ ಯೂಟ್ಯೂಬ್ ಮತ್ತು ಫೇಸ್‌ಬುಕ್ ಕೂಡ ಅನೇಕರಿಗೆ ಆದಾಯದ ಮಾರ್ಗವಾಗಿ ಬದಲಾಗಿದೆ. ಆದರೆ, ಇವೆರಡರಲ್ಲೂ ಮಾನಿಟೈಸೇಷನ್(ಜಾಹೀರಾತು ಪಡೆಯಲು ಅರ್ಹರಾಗಲು) ಕೆಲವು ಮಾನದಂಡಗಳಿವೆ. ವಿಡಿಯೋಗಳನ್ನು ಇಷ್ಟು ಸಾವಿರ ಜನರು ನೋಡಿರಬೇಕು, ಇಷ್ಟು ಸಬ್‌ಸ್ಕ್ರೈ ಬರ್‌ಗಳನ್ನು ಹೊಂದಿರ
ಲೇಬೇಕು ಎನ್ನುವುದೀಗ ಕಡ್ಡಾಯವಾಗಿದೆ. ಹೀಗಾಗಿ, ಈ ಪೇಜ್‌ಗಳಿಗೆ ಸುಲಭವಾಗಿ ವೀವ್ಸ್ ಪಡೆಯುವುದಕ್ಕಾಗಿ ಕೊರೊನಾ ಅನುಕೂಲ ಮಾಡಿಕೊಡುತ್ತಿದೆ. ಯೂಟ್ಯೂಬ್ ಅಂತೂ ಕೊರೊನಾ ಸಂಬಂಧಿ ಸಾವಿರಾರು ವಿಡಿಯೋಗಳಿಂದ ತುಂಬಿ ತುಳುಕುತ್ತಿದೆ. ಇವುಗಳಿಂದ ಜನರನ್ನು
ದೂರವಿಡುವುದಕ್ಕೆ ಸಾಧ್ಯವೇ ಇಲ್ಲದಂತಾಗಿದೆ. ಭಾರತದಲ್ಲಿ ಯೂಟ್ಯೂಬ್‌ನ ಸಕ್ರಿಯ ಬಳಕೆದಾರರ ಸಂಖ್ಯೆ ತಿಂಗಳಿಗೆ 26.5 ಕೋಟಿಯಷ್ಟಿದೆ! ಕೆಲವು ಯೂಟ್ಯೂಬ್ ಚಾನೆಲ್‌ಗಳಂತೂ, ಹ್ಯಾಂಡ್ ಸ್ಯಾನಿಟೈಸರ್‌ಗಳು, ಮಾಸ್ಕ್ಗಳ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ, ಅದನ್ನು ಖರೀದಿಸುವಂತೆ ಆನ್‌ಲೈನ್ ಲಿಂಕ್ ಅನ್ನೂ ಎಂಬೆಡ್ ಮಾಡುತ್ತಿವೆ. ಜನರು ಆ ಲಿಂಕ್ ಮೂಲಕ ಆ ಉತ್ಪನ್ನಗಳನ್ನು ಖರೀದಿಸಿದರೆ, ಕಂಪನಿಗಳಿಂದ ಚಾನೆಲ್‌ಗೆ ಒಂದಿಷ್ಟು ಪ್ರಮಾಣದಲ್ಲಿ ಹಣ ಸಂದಾಯವಾಗುತ್ತದೆ! ಹೆಚ್ಚು ಜನ ನೋಡಲಿ ಎಂಬ ಕಾರಣಕ್ಕಾಗಿ, ಕೊರೊನಾಗೆ ಸಂಬಂಧವೇ ಇಲ್ಲದ ವಿಡಿಯೋಗಳನ್ನೂ ಹರಿಬಿಡಲಾಗುತ್ತಿದೆ. ಉದಾಹರಣೆಗೆ, ಚೀನಾದ ಪೊಲೀಸರು ಕೆಲವು ವ್ಯಕ್ತಿಗಳನ್ನು ಶೂಟ್ ಮಾಡಿ ಸಾಯಿಸುತ್ತಿರುವ ವಿಡಿಯೋ ಈಗ ಭಾರತದಾದ್ಯಂತ ವೈರಲ್ ಆಗಿದ್ದು, “ಚೀನಾ ಪೊಲೀಸರು ರೋಗಿಗಳನ್ನು ಸಾಯಿಸುತ್ತಿದ್ದಾರೆ’ ಎಂಬ ತಲೆಬರಹದಲ್ಲಿ ಅದು ನಿತ್ಯ ಓಡಾಡುತ್ತಲೇ ಇದೆ. ಆದರೆ ಇದು ಚೀನಾದ ಸಿನಿಮಾವೊಂದರ ದೃಶ್ಯ ಎನ್ನುವ ಸತ್ಯ ಮಾತ್ರ ವೈರಲ್ ಆಗುವುದೇ ಇಲ್ಲ! ಸತ್ಯಕ್ಕಿಂತಲೂ ಸುಳ್ಳಿಗೆ ಹೆಚ್ಚು ವೇಗ!
ಕೊರೊನಾ ವೈರಸ್ ಹೇಗೆ ಹರಡಿತು ಎನ್ನುವ ಬಗ್ಗೆ ಒಂದು ನಕಲಿ ವಿಡಿಯೋ ಅತ್ಯಂತ ಜನಪ್ರಿಯವಾಗಿದ್ದು, ಇದರ ಮೂಲವಿರುವುದು ನವದೆಹಲಿಯಿಂದ 270 ಕಿ.ಮೀ. ದೂರದಲ್ಲಿರುವ ಬರೇಲಿ ನಗರದಲ್ಲಿ! 10 ಲಕ್ಷ ಜನಸಂಖ್ಯೆಯಿರುವ ಬರೇಲಿಯಲ್ಲಿ ಐದಾರು ಹುಡುಗರ ಗುಂಪೊಂದು ಯೂಟ್ಯೂಬ್ ಚಾನೆಲ್ ನಡೆಸುತ್ತದೆ. ಈ ಹುಡುಗರು ಅಪ್ಲೋಡ್ ಮಾಡುವ ವಿಡಿಯೋಗಳು ಒಂದೋ ಅತ್ಯಂತ ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ, ಇಲ್ಲವೇ ಹಸಿ ಸುಳ್ಳುಗಳಿಂದ ತುಂಬಿರುತ್ತವೆ. ಈಗ ಈ ಯೂಟ್ಯೂಬ್ ಚಾನೆಲ್‌ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 7.21 ಮಿಲಿಯನ್ ತಲುಪಿದೆ(72.1 ಲಕ್ಷ). ಗಮನ ಸೆಳೆಯುವಂಥ, ಬೆಚ್ಚಿಬೀಳಿಸುವಂಥ ಚಿತ್ರಗಳನ್ನು, ಹೆಡ್‌ಲೈನ್‌ಗಳನ್ನು ಬಳಸುವ ಈ ಚಾನೆಲ್‌ನಲ್ಲಿ ಒಂದು ವಿಡಿಯೋ 87 ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ. ಕೊರೊನಾ ವೈರಸ್ ಮೀನು, ಚಿಕನ್‌ನ ಸೇವನೆಯಿಂದ ಬರುತ್ತದೆ ಎಂಬ ಅಸಂಬದ್ಧ ವಾದ ಮುಂದಿಡುತ್ತದೆ ಈ ವಿಡಿಯೋ. ಹೇಳಲೇಬೇಕಾದ ಸಂಗತಿಯೆಂದರೆ, ಈ ವಿಡಿಯೋ ತಯ್ನಾರಿಸಿರುವ ಹುಡುಗ 12ನೇ ತರಗತಿಯಲ್ಲಿ ಸೈನ್ಸ್‌ನಲ್ಲಿ ಫೇಲ್ ಆಗಿ ಮನೆಯಲ್ಲಿದ್ದಾನೆ!
ಕೊರೊನಾ ಸಂಬಂಧಿ ವಿಡಿಯೋಗಳನ್ನು ಹಾಕಲಾರಂಭಿಸಿದ ನಂತರದಿಂದ ಪ್ರತಿ ದಿನ ತಮ್ಮ ಚಾನೆಲ್‌ಗೆ 10-20 ಸಾವಿರ ಹೊಸ ಸಬ್‌ಸ್ಕೈಬರ್‌ಗಳು ಬರುತ್ತಿದ್ದಾರೆ , ಈಗ ಆದಾಯವೂ ಬರುತ್ತಿದೆ ಎನ್ನುತ್ತಾರೆ ಇವರೆಲ್ಲ. ಈ ಹುಡುಗರಿಗೆ, ತಮ್ಮ ಚಾನೆಲ್ ಬೆಳೆಯುತ್ತಿದೆ ಎಂಬ ಸಂತೋಷ ಇದೆ, ಆದರೆ ಅದು ಸೃಷ್ಟಿಸುತ್ತಿರುವ ಆವಾಂತರಗಳನ್ನು ಗ್ರಹಿಸುವ ಸಾಮರ್ಥ್ಯ ಇಲ್ಲ. ಈ ರೀತಿ ಮಾಡುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರೆ, “ಸರ್, ಪ್ರತಿ ರಾಜ್ಯಗಳಲ್ಲೂ ನಮ್ಮಂಥ ಸಾವಿರಾರು ಯೂಟ್ಯೂಬ್ ಚಾನೆಲ್‌ಗಳಿವೆ. ಅವೆಲ್ಲ ಹೀಗೇ ಮಾಡುತ್ತವಲ್ಲ? ಅವನ್ನೇಕೆ ನೀವು ಪ್ರಶ್ನಿಸುವುದಿಲ್ಲ’ ಎಂದು ಕೇಳುತ್ತಾರೆ. ಗಮನಿಸಬೇಕಾದ ಸಂಗತಿಯೆಂದರೆ, ಈ ರೀತಿ ಅಂತರ್ಜಾಲದಲ್ಲಿ ಕೊರೊನಾ ಕುರಿತು ತಪ್ಪು ಮಾಹಿತಿ ಹರಿದಾಡದಿರಲಿ ಎಂಬ ಕಾರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಯೂಟ್ಯೂಬ್ ಕೂಡ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಖ್ಯವಾಗಿ, ಕೊರೊನಾದ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳ ಕೆಳಗೆ, ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಕುರಿತು ನೈಜ ಮಾಹಿತಿ ಬರುವಂತೆ ನೋಡಿಕೊಳ್ಳುತ್ತಿದೆ. ಆದರೆ ಈ ಮಾಹಿತಿಯನ್ನು ನೋಡುವವರ ಸಂಖ್ಯೆ ಎಷ್ಟಿದೆ? ಇದ್ದರೂ ಆಂಗ್ಲಭಾಷೆಯಲ್ಲಿರುವ ಆ ಮಾಹಿತಿ, ಹಳ್ಳಿಗಳಲ್ಲಿರುವ ಕೋಟ್ಯಂತರ ಅಂತರ್ಜಾಲ ಬಳಕೆದಾರರಿಗೆ ಹೇಗೆ ಅರ್ಥವಾಗಬೇಕು? ಕೊರೊನಾವನ್ನು ಹೇಗಾದರೂ ತಡೆಗಟ್ಟಿಬಿಡಬಹುದು, ಆದರೆ, ಅಷ್ಟೇ ಅಪಾಯಕಾರಿಯಾದ ಸುಳ್ಳು ಸುದ್ದಿಗಳ ಹರಿವನ್ನು ತಡೆಯುವುದಾದರೂ ಹೇಗೆ ಎಂಬ ಪ್ರಶ್ನೆಗೆ ಮಾತ್ರ ಸದ್ಯಕ್ಕೆ ಭಾರತದ ಬಳಿ ಉತ್ತರವಿಲ್ಲ. ಕೃಪೆ: ಜನಪತ್ರಿಕಾ ಪೋಸ್ಟ್ ಮಹೇಂದ್ರ.ಎಸ್.ಡಿ