ಆ ಮನುಷ್ಯ ಜ್ವರದಿಂದ ತೂರಾಡುತ್ತಾ, ಕೆಮ್ಮುತ್ತಾ ಬಂದು ಆಟೋದೊಳಗೆ ಕೂರುತ್ತಾನೆ. ಚಾಲಕ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸುತ್ತಾನೆ. ಅಷ್ಟರಲ್ಲೇ ಬರುವ ಬೈಕ್ ಅನ್ನು ರೋಗಿ ಅಡ್ಡಹಾಕುತ್ತಾನೆ. “ಏಯ್ ನಿಲ್ಲಿಸ್ಬೇಡ, ಅವನಿಗೆ ನಿಫಾ ಇದೆ’ ಎನ್ನುವ ಆಟೋ ಚಾಲಕನ ಕೂಗು, ರೋಗಿಯ ಅಸಹಾಯಕ ಧ್ವನಿ, ಇಂದಿನ ಕೊರೊನಾ ಕಾಲಕ್ಕೂ ಕೇಳುವಂಥ ಪ್ರತಿಧ್ವನಿ.
ಕೊರೊನಾದಷ್ಟೇ ರಣಭೀಕರ ವೈರಸ್ ನಿಫಾ, ಈ ಹಿಂದೆ ಕೇರಳವನ್ನು ತಬ್ಬಿಬ್ಬಾಗಿಸಿತ್ತು. ಸಾಕಷ್ಟು ಜನರನ್ನು ಬಲಿಪಡೆದಿತ್ತು. ನಿಫಾ ಬಂದಾಗ ಸಮಾಜ ವರ್ತಿಸಿದ ರೀತಿಯನ್ನು “ವೈರಸ್’ ಚಿತ್ರ ನೈಜ ಕಥನದೊಂದಿಗೆ ಮನ ತಟ್ಟುವಂತೆ ಚಿತ್ರಿಸಿದೆ. ಝಕಾರಿಯಾ ಎನ್ನುವ ಸಾಮಾನ್ಯ ವ್ಯಕ್ತಿಯಿಂದ ಹರಡಿದ ಜ್ವರ, ನೂರಾರು ಜನರನ್ನು ದಾಟಿಕೊಂಡು, ಹಬ್ಬುತ್ತಾ ಹೋಗುತ್ತೆ.
ಇದ್ಯಾವ ಜ್ವರ? ಯಾರಿಂದ, ಹೇಗೆ ಹಬ್ಬಿತು? ಎನ್ನುವ ಡಾ. ಅನು ನಡೆಸುವ ಶೋಧವೇ, ಈ ಕಥೆಯ ರೋಚಕ ಓಟ. ಮನುಷ್ಯನ ಅಹಂನ ಕಟ್ಟಡವನ್ನು ಪುಟಾಣಿ ವೈರಸ್ ಹೇಗೆ ಧಸಕ್ಕನೆ ಕುಸಿದುಬೀಳುವಂತೆ ಮಾಡುತ್ತೆ ಎನ್ನುವ ಪಾಠ ಇಲ್ಲಿದೆ. ವೈರಸ್‌ಗಳು ಇಂಥ ರಣಭೀಕರ ಅವತಾರ ಎತ್ತಿದಾಗ, ವೈದ್ಯಲೋಕಕ್ಕೂ ಕಾಡುವ “ಪ್ಯಾನಿಕ್’ ಅತ್ಯಂತ ಕ್ಲೋಸಪ್ ಭಾವಗಳಲ್ಲಿ ತೋರಿಸಲಾಗಿದೆ.
ವೈದ್ಯನೊಬ್ಬ ತಾನು ಪ್ರೀತಿಸುತ್ತಿರುವ ಹುಡುಗಿಗೆ ನಿಫಾ ಬಂದಾಗ, ಸಾವಿನಂಚಿನಲ್ಲಿರುವ ಆಕೆಯನ್ನು ಪ್ರೀತಿ ತೋರಿಸಿಯೇ ಗುಣಮುಖವಾಗಿಸುವ ಸನ್ನಿವೇಶ ಮನೋಜ್ಞವಾಗಿದೆ. ಕೊರೊನಾ ಪೀಡಿತ ಸಮಾಜದ ಭವಿಷ್ಯದ ದಿನಗಳು ಹೇಗಿರಬಹುದು ಎನ್ನುವುದನ್ನು “ವೈರಸ್’ ಚಿತ್ರದ ಕನ್ನಡಿ ಮೂಲಕ ನಾವು ನೋಡಿಕೊಳ್ಳಬಹುದು.
ವೈರಸ್ (2019)
ಭಾಷೆ: ಮಲಯಾಳಂ
ಅವಧಿ: 152 ನಿಮಿಷ
ವೀಕ್ಷಣೆ: ಅಮೇಜಾನ್‌ಪ್ರೈಮ್‌ನಲ್ಲಿ ಲಭ್ಯ