ನಟ ಪುನೀತ್ ರಾಜಕುಮಾರ್ ಇದೇ ಮಾರ್ಚ್ 17ರಂದು 45ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಪ್ರತಿಬಾರಿಯಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಿಸಲು ಪವರ್ ಸ್ಟಾರ್ ಅಭಿಮಾನಿಗಳು ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಇವೆಲ್ಲದರ ನಡುವೆ ಈ ಬಾರಿ ಸ್ವತಃ ಪುನೀತ್ ರಾಜಕುಮಾರ್ ಅವರೇ ತಮ್ಮ ಅದ್ಧೂರಿ ಬರ್ತ್‌ಡೇಗೆ ಬ್ರೇಕ್ ಹಾಕುವ ಸುಳಿವನ್ನು ನೀಡಿದ್ದಾರೆ.
ಹೌದು, ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಬರ್ತ್‌ಡೇ ಆಚರಿಸಬೇಕು ಎಂಬ ಯೋಚನೆಯಲ್ಲಿದ್ದ ಅಭಿಮಾನಿಗಳಿಗೆ ಸ್ವತಃ ಪುನೀತ್, ಅಂದು ಯಾವುದೇ ಆಚರಣೆ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಅಂದಹಾಗೆ, ಪುನೀತ್ ರಾಜಕುಮಾರ್ ಈ ರೀತಿ ಹೇಳ್ಳೋದಕ್ಕೆ ಕಾರಣವಾಗಿರುವುದು ಕೊರೊನಾ ವೈರಸ್ ಭೀತಿ. ಮಹಾಮಾರಿ ಕೊರೊನಾ ಸದ್ಯ ಕರ್ನಾಟಕಕ್ಕೆ ಕಾಲಿಟ್ಟಿದ್ದು, ಈಗಾಗಲೇ ಅಲ್ಲಲ್ಲಿ ಕೊರೊನಾ ವೈರಸ್ ಪ್ರಕರಣ ದಾಖಲಾಗುತ್ತಿದೆ.
ಇನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯ ಸರ್ಕಾರ ಕೂಡ ಸುಮಾರು ಒಂದು ವಾರಗಳ ಕಾಲ ಚಿತ್ರಮಂದಿರ, ಮಾಲ್‌ಗಳು, ಶಾಲಾ-ಕಾಲೇಜುಗಳು, ಬಹುತೇಕ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಬ್ರೇಕ್ ಹಾಕಿದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ಚಿತ್ರಮಂದಿರಗಳು ಬಂದ್ ಆಗಿದ್ದು, ಅನೇಕ ಚಿತ್ರಗಳ ಶೂಟಿಂಗ್ ಕೂಡ ಸ್ಥಗಿತಗೊಂಡಿದೆ. ಒಟ್ಟಾರೆ ಇಡೀ ಚಿತ್ರೋದ್ಯಮದ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿವೆ.
ಹೀಗಾಗಿ ಈ ಬಾರಿ ಪುನೀತ್ ರಾಜಕುಮಾರ್ ಕೂಡ ತಮ್ಮ ಹುಟ್ಟುಹಬ್ಬವನ್ನು ಬಹಿರಂಗವಾಗಿ, ಅಭಿಮಾನಿಗಳ ನಡುವೆ ಆಚರಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. “ಈ ಬಾರಿ ಜನ್ಮದಿನದ ಆಚರಣೆಗೆ ಯಾರು ಮನೆಯ ಬಳಿ ಬರಬೇಡಿ. ಅಂದು ಆಚರಣೆ ಮಾಡುವುದಿಲ್ಲ. ನೀವು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿರುವುದೇ ನೀವು ನನಗೆ ನೀಡುವ ದೊಡ್ಡ ಉಡುಗೊರೆ’ ಎಂದು ಪುನೀತ್‌ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಶೇರ್ ಮಾಡಿರುವ ಪುನೀತ್ ರಾಜಕುಮಾರ್, “ಎಲ್ಲ ಸಮಸ್ತ ಅಭಿಮಾನಿ ದೇವರುಗಳಿಗೆ ನನ್ನ ಕಡೆಯಿಂದ ನಮಸ್ಕಾರ. ನಾನು ಈ ವರ್ಷ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಯಾರೂ ತಮ್ಮ ತಮ್ಮ ಊರುಗಳಿಂದ ಮಾರ್ಚ್ 17ರಂದು ನನ್ನ ಮನೆಗೆ ಬರಬೇಡಿ. ಅಂದು ನಾನು ಮನೆಯಲ್ಲಿಯೂ ಇರುವುದಿಲ್ಲ. ನಮ್ಮ ಇಡೀ ದೇಶದಲ್ಲಿ, ಜಗತ್ತಿನಲ್ಲಿ ಈಗ ತೊಂದರೆ ಇದೆ. ಸರ್ಕಾರ ಏನು ನಿರ್ಧಾರ ತೆಗೆದುಕೊಂಡಿದೆ, ಅದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು.
ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮಗಳಿಗೆ ಸಹಕಾರ ನೀಡಬೇಕು’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. “ನನ್ನ ಜನ್ಮದಿನ ಆಚರಣೆಗೆ ಇದುವರೆಗೆ ಬೇರೆ ಬೇರೆ ಊರುಗಳಿಂದ ಬರುತ್ತಿದ್ದಿರಿ, ಪ್ರೀತಿ ವಿಶ್ವಾಸ ತೋರಿಸುತ್ತಿದ್ದಿರಿ. ಖಂಡಿತವಾಗಿಯೂ ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಹೀಗೆ ಯಾವಾಗಲೂ ನನ್ನ ಮೇಲೆ ಇರುತ್ತದೆ ಎಂದು ಭಾವಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ, ಹುಷಾರಾಗಿರಿ’ ಎಂದು ಪುನೀತ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಇತ್ತೀಚೆಗೆ ವಿದೇಶದಲ್ಲಿ ನಡೆಯಬೇಕಿದ್ದ “ಯುವರತ್ನ’ ಚಿತ್ರದ ಹಾಡಿನ ಚಿತ್ರೀಕರಣವನ್ನು ಕೊರೊನಾ ಭೀತಿಯಿಂದ ರದ್ದು ಮಾಡಲಾಗಿತ್ತು,
ಇದೀಗ ಪುನೀತ್ ಹುಟ್ಟುಹಬ್ಬ ಆಚರಣೆಯನ್ನೂ ರದ್ದು ಮಾಡಲಾಗುತ್ತಿದೆ. ಒಟ್ಟಾರೆ ಜನ್ಮದಿನದ ಆಚರಣೆಯನ್ನು ಅದ್ಧೂರಿಯಾಗಿ ಮಾಡಲು ಕಾದಿದ್ದ ಅಭಿಮಾನಿಗಳಿಗೆ ಸಂದೇಶ ನೀಡಿರುವ ಪುನೀತ್ ರಾಜಕುಮಾರ್, ಅಭಿಮಾನಿಗಳಿಗೆ ಕೊಂಚ ಬೇಸರವಾದರೂ, ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ತಮ್ಮ ಹುಟ್ಟುಹಬ್ಬ ಆಚರಣೆ ರದ್ದು ಮಾಡಿರುವುದು ಒಳ್ಳೆಯ ನಿರ್ಧಾರ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.