Advertisement
ಯುವಕ ಓಡಾಡಿದ ಮಾರ್ಗಸೂಚಿಯನ್ನು ಕಾಸರಗೋಡು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಮಾ. 14ರಂದು ಬೆಳಗ್ಗೆ 5.20ಕ್ಕೆ ಮಂಗಳೂರಿಗೆ ಬಂದ ಬಳಿಕ ಇಬ್ಬರು ಸಂಬಂಧಿಕರೊಂದಿಗೆ ಅವರು ಕಾಸರಗೋಡಿಗೆ ತೆರಳಿದ್ದಾರೆ. ಅಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಆತನನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. 8 ಗಂಟೆಗೆ ನಾಲ್ವರೂ ಕೂಡ ಇನ್ನೊಂದು ಖಾಸಗಿ ಆಸ್ಪತ್ರೆಯ ಕ್ಯಾಂಟಿನ್‌ಗೆ ತೆರಳಿ ಚಹಾ ಸೇವಿಸಿದ್ದಾರೆ. ಬಳಿಕ ಪರೀಕ್ಷೆಗೆ ಗಂಟಲು ಸ್ರಾವ ಮಾದರಿ ನೀಡಲು ಸರಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಮಧ್ಯಾಹ್ನ ಒಂದು ಗಂಟೆಗೆ ಕಾಸರಗೋಡಿನ ಬೇವಿಂಜೆಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿ ರೋಗಿ ಮೂರು ದಿನ ಕಾಲ ನಿಗಾದಲ್ಲಿದ್ದ. ಸೋಮವಾರ ರಾತ್ರಿ ಬಂದ ವೈದ್ಯಕೀಯ ಪರೀಕ್ಷೆಯಲ್ಲಿ ಆತನಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಯುವಕನನ್ನು ಕಾಸರಗೋಡು ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಸರಗೋಡಿನ ಯುವಕನಲ್ಲಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತ ಓಡಾಟ ನಡೆಸಿರುವ ಮಾಹಿತಿಯನ್ನು ಪಡೆಯಲಾಗುತ್ತಿದೆ. ವಿಮಾನದಲ್ಲಿದ್ದ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹಿಸಿ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.