ಸುವರ್ಣ ವಿಧಾನಸೌಧ: ಚೀನಾದಲ್ಲಿ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಉತ್ತರಿಸಿ, ರಾಜ್ಯ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಿದೆ. ಜನತೆ ಸಹ ಸಹಕರಿಸಬೇಕು ಎಂದು ಈ ಸದನದ ಮೂಲಕ ರಾಜ್ಯದ ಜನತೆಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಬೂಸ್ಟರ್ ಡೋಸ್ ಕಡ್ಡಾಯ ಮಾಡಬೇಕು. ಚೀನಾದಿಂದ ವಿಮಾನಗಳು ಬೆಂಗಳೂರು, ಮಂಗಳೂರಿಗೆ ಬರುತ್ತಿದ್ದರೆ ತಕ್ಷಣ ಕೇಂದ್ರ ಸರ್ಕಾರದ ಜತೆ ಮಾತನಾಡಿ ಬಂದ್ ಮಾಡಿಸಬೇಕು ಎಂದು ಹೇಳಿದರು.
ಬಿಜೆಪಿಯ ಈಶ್ವರಪ್ಪ , ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್ ಇದಕ್ಕೆ ಧ್ವನಿಗೂಡಿಸಿದರು. ಮೂರನೇ ಡೋಸ್‌ನಿಂದ ಅರೋಗ್ಯ ಸಮಸ್ಯೆ ಬರುತ್ತದೆ ಎಂಬ ಮಾತುಗಳಿವೆ ಆ ಬಗ್ಗೆ ಜಾಗ್ರತೆ ಮೂಡಿಸಿ ಎಂದು ಬಂಡೆಪ್ಪ ಕಾಶೆಂಪುರ್ ತಿಳಿಸಿದರು.
ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಮಾತನಾಡಿ, ಎಸಿ ವ್ಯವಸ್ಥೆಯಿಂದ ವೈರಸ್ ಹರಡುತ್ತದೆ ಎಂದು ಹೇಳಲಾಗುತ್ತದೆ. ಆ ಬಗ್ಗೆಯೂ ಗಮನಹರಿಸಬೇಕು. ಸದನದಲ್ಲಿ ಎಸಿ ವ್ಯವಸ್ಥೆ ಇದೆ. ಕಳೆದ ಬಾರಿ ಅಧಿವೇಶನ ಸಂದರ್ಭದಲ್ಲಿ ಶಾಸಕರು ಇಲ್ಲಿಂದ ನೇರವಾಗಿ ಆಸ್ಪತ್ರೆಗೆ ಸೇರಿದ್ದರು. ಹೀಗಾಗಿ ನಮಗೆ ಸ್ವಲ್ಪ ಸಮಸ್ಯೆಯಾದರೂ ಪರವಾಗಿಲ್ಲ, ಎಸಿ ವ್ಯವಸ್ಥೆ ತೆಗೆಯಬಹುದೇ ನೋಡಿ ಎಂದರು. ಮುಖ್ಯಮಂತ್ರಿಯವರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು.