Advertisement

ತಾಳಿಯಲ್ಲಿನ ಹವಳ ಒಡೆದ ಮಹಿಳೆಯರು

02:13 PM Jul 06, 2017 | |

ಬಳ್ಳಾರಿ: ಗಾಳಿ ಸುದ್ದಿಗೆ ಕಿವಿಗೊಟ್ಟ ಜಿಲ್ಲೆಯ ವಿವಾಹಿತ ಮಹಿಳೆಯರು ಮಂಗಳವಾರ ನಡು ರಾತ್ರಿಯಿಂದ ತಮ್ಮ ಮಾಂಗಲ್ಯದಲ್ಲಿರುವ ಕೆಂಪು ಹವಳವನ್ನು ಕಲ್ಲಿನಿಂದ ಜಜ್ಜಿ ಒಡೆದು ಹಾಕುತ್ತಿರುವ ವಿಚಿತ್ರ ವಿದ್ಯಮಾನ ನಡೆದಿದೆ.

Advertisement

ತಾಳಿಯಲ್ಲಿರುವ ಕೆಂಪು ಹವಳ ಮಾತಾಡುತ್ತೆ. ಗಂಡಂದಿರು ಸಾಯ್ತಾರೆ ಎಂಬ ಗಾಳಿ ಸುದ್ದಿ ಹರಡಿದೆ. ರಾತ್ರಿ ಹರಡಿದ ಈ ಸುದ್ದಿಯಿಂದ ಮಹಿಳೆಯರೆಲ್ಲಾ ರಾತ್ರೋ ರಾತ್ರಿಯೇ ತಮ್ಮ ತಾಳಿಯಲ್ಲಿದ್ದ ಕೆಂಪು ಹವಳಗಳನ್ನು ಕಲ್ಲಿನಿಂದ ಕುಟ್ಟಿ ತೆಗೆದಿದ್ದಾರೆ. ಬಳ್ಳಾರಿ ತಾಲೂಕಿನ ಮೋಕಾ, ಸಿರುಗುಪ್ಪ ಸೇರಿದಂತೆ ನಾನಾ ಕಡೆ ಇದೇ ವಿದ್ಯಮಾನ ನಡೆದಿದೆ. ಈ ಸುದ್ದಿ ತಿಳಿದು ಅನೇಕರು ಬುದ್ಧಿವಾದ ಹೇಳಿದರೂ ಕೇಳದ ನೂರಾರು ಮಹಿಳೆಯರು ಹೋದರೆ, ಹವಳ ಹೋಗಲಿ ಗಂಡ ಉಳಿಯಲಿ ಎಂದು ಪುಡಿ ಮಾಡಿದ್ದಾರೆ. ಇಂತಹ ಗಾಳಿ ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವದಂತಿ ಹಿನ್ನೆಲೆ: ಇಂತಹ ವದಂತಿಗಳು ಆಗಾಗ ಹಬ್ಬುತ್ತಿರುತ್ತವೆ. ಇದಕ್ಕೆ ಸ್ವಾರಸ್ಯಕರವಾದ ಹಿನ್ನೆಲೆ ಇದೆ. ನೇಕಾರರು ತಾವು ನೇಯ್ದ ಸೀರೆಗಳನ್ನು ಬಣ್ಣದಲ್ಲಿ ಹಾಕಿ ಅದ್ದುವಾಗ ಬಣ್ಣ ಸಮನಾಗಿ ಸೀರೆಗೆ ಹರಡದೇ ಇದ್ದರೆ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಹೀಗೆ ಸುದ್ದಿ ಹಬ್ಬಿಸಿದ ನಂತರ ಸೀರೆಗಳಿಗೆ ಬಣ್ಣ ಸರಿಯಾಗಿ ಹರಡುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ಹೊಸಪೇಟೆ ತಾಲೂಕಿನ ಕಮಲಾಪುರದ ಸುರೇಶ್‌. ಹಳೆ ತಲೆಮಾರಿನ ಅಜ್ಜಿಯರು ಈ ಬಗ್ಗೆ ಹೇಳುತ್ತಿದ್ದರು.
ಈ ಹವಳದ ವಂದತಿಯೂ ಹೀಗೆ ಹಬ್ಬಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ರಾತ್ರೋರಾತ್ರಿ ಹಬ್ಬಿದ ವದಂತಿಯಿಂದ ಸಾವಿರಾರು ಹವಳಗಳು ಪುಡಿಯಾಗಿದ್ದು ಮಾತ್ರ ಸತ್ಯ. 

ಹೂವಿನಹಡಗಲಿ: ಜನ ಮರುಳ್ಳೋ ಜಾತ್ರೆ  ಮರುಳ್ಳೋ ಎನ್ನುವ ಹಾಗೆ ನಿನ್ನೆ ನಡುರಾತ್ರಿ ಗಾಳಿ ಸುದ್ದಿಗೆ ಬಲಿಯಾಗಿ ತಮ್ಮ ಪವಿತ್ರ ತಾಳಿಯಲ್ಲಿನ ಹವಳ- ಮುತ್ತುಗಳನ್ನು ಒಡೆಯುತ್ತಿರುವುದೇ ಸಾಕ್ಷಿಯಾಗಿದೆ. ಎಲ್ಲೋ ದೂರದಲ್ಲಿ ಯಾವುದು ತಳ ಬುಡವಿಲ್ಲದ ಮಾಹಿತಿ ಮೇರೆಗೆ ಕೇವಲ ಮೊಬೈಲ್‌ ಮೂಲಕ ಒಬ್ಬರೊಬ್ಬರಿಗೆ ನಿಮ್ಮ ತಾಳಿಯಲ್ಲಿನ
ಹವಳವನ್ನು ಕೂಡಲೇ ಒಡೆದು ಹಾಕಿ ಅವು ಒಂದಕ್ಕೊಂದು ಮಾತನಾಡಿಕೊಳ್ಳುತ್ತವೆ. ಇದರಿಂದ ನಿಮ್ಮ ಗಂಡಂದಿರ ಸಾವು ಸಂಭವಿಸುತ್ತದೆ ಎನ್ನುವ ಸುದ್ದಿ ವೇಗವಾಗಿ ಹಬ್ಬಿದೆ. ಇದರಿಂದ ರಾತ್ರೋ ರಾತ್ರಿ ಅದೆಷ್ಟೋ ಜನ ಮುತ್ತೆದೆಯರು ಗಂಡನನ್ನು ಉಳಿಸಿಕೊಳ್ಳಲು ತಾಳಿಯಲ್ಲಿನ ಹವಳವನ್ನು ಒಡೆದು ಹಾಕಿರುವ ಸುದ್ದಿ ಕೇಳಿ ಬಂದಿದೆ. ಬೆಳಿಗ್ಗೆ ಪರಸ್ಪರರು ಆದೇ ಸುದ್ದಿ ಮಾತನಾಡಿಕೊಳ್ಳುತ್ತಿರುವುದು ಪಟ್ಟಣ ಒಳಗೊಂಡಂತೆ ಗ್ರಾಮೀಣ ಭಾಗದಲ್ಲಿ ಗಾಳಿ ಸುದ್ದಿ ಹಬ್ಬಿಕೊಂಡಿತ್ತು. ಅದಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಕಟ್ಟಿ ತುಂಬಾ ದಿನಗಳ ಹಿಂದೆ ಬಾಲ ಬಸವ ಹೇಳಿದ್ದನಂತೆ ಹವಳಕ್ಕೆ ಆಯುಷ್ಯ ಮುಗಿಯುತ್ತದೆ. ಆವುಗಳನ್ನು ಹೊಡೆದು ಹಾಕಬೇಕು ಅವು ಮೈತೈದೆಯರ ಕೊರಳಲ್ಲಿದ್ದರೆ ಅನಿಷ್ಠ ಎಂದು
ಮಾತನಾಡಿಕೊಳ್ಳುತ್ತಿದ್ದರು. 

ಪಟ್ಟಣದಲ್ಲಿ ನಾಗಾಸಾಧುಗಳು: ಇಷ್ಟು ಸಾಲದು ಎನ್ನುವಂತೆ ಪಟ್ಟಣದಲ್ಲಿ ನಾಗಾಸಾಧುಗಳ ಸಂಚಾರ ಜನತೆಯನ್ನು ತಬ್ಬಿಬ್ಬುಗೊಳಿಸಿದ್ದು. ಕಳೆದ ಸುಮಾರು 2-3 ತಿಂಗಳ ಹಿಂದೆ ಉತ್ತರ ಪ್ರದೇಶ ನೋಂದಣಿ ಸಂಖ್ಯೆ ಇರುವ ಟಾಟಾ ಸುಮೋದಲ್ಲಿ ನಾಗಾಸಾಧುಗಳೆಂದು ಹೇಳಿಕೊಂಡು ಬಂದು ಜನತೆಯಿಂದ ಹಣ ವಸೂಲಿ ಮಾಡುತ್ತಿದ್ದಾರೆ.
ಪುನಃ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ಪ್ರತ್ಯಕ್ಷವಾಗಿದ್ದು ಮನೆಗಳಿಗೆ ನುಗ್ಗಿ ತಾವು ನಾಗಾ ಸಾಧುಗಳು ಲೋಕಕಲ್ಯಾಣಕ್ಕಾಗಿ ಬಂದಿರುವುದಾಗಿ ತಿಳಿಸಿ ಅವರಿಗೆ ಕೈಯಲ್ಲಿರುವ ಬೂದಿ ಮುಂತಾದವುಗಳನ್ನು ಹಚ್ಚಿ ಹಣ
ವಸೂಲಿಗೆ ಮುಂದಾಗುತ್ತಿರುವುದು ಕಂಡು ಬಂದಿದೆ. ಪೊಲೀಸ್‌ನವರು ಅವರನ್ನು ಕರೆ ತಂದು ವಿಚಾರಣೆ ಮಾಡಲಾಗಿ ತಾವು ದೇಶ ಸಂಚಾರಿಗಳು ಎಂದು ಹೇಳಿದ್ದಾರೆ. ಅವರಲ್ಲಿ ಒಬ್ಬ ಮಾತ್ರ ನಗ್ನನಾಗಿದ್ದು ಮೈಯೆಲ್ಲ ಬೂದಿ
ಬಡಿದುಕೊಂಡಿರುವುದು ತಿಳಿದುಬಂದಿದೆ.  ಉಳಿದವರು ಕಾವಿ ಧರಿಸಿದ್ದರು. ಇಂದು ಪಟ್ಟಣದಲ್ಲಿ ಹಬ್ಬಿರುವ ಈ ಹವಳದ ಸುದ್ದಿಗೂ ಈ ಸಾಧುಗಳಿಗೂ ಜನತೆ ತಾಳೆ ಹಾಕಿ ಮಾತನಾಡುತ್ತಿದ್ದಾರೆ.

Advertisement

ವದಂತಿಗೆ ಕಿವಿಗೊಡಬೇಡಿ
ಸಿರುಗುಪ್ಪ:
ತಾಲೂಕಿನಾದ್ಯಾಂತ ಹೆಣ್ಣು ಮಕ್ಕಳ ತಾಳಿಯ ಸರದಲ್ಲಿರುವ ಕೆಂಪು ಮಣಿಗಳು ಮಾತನಾಡುತ್ತಿವೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದ ಮಹಿಳೆಯರು ತಮ್ಮ ತಾಳಿಸರದಲ್ಲಿದ್ದ ಕೆಂಪು ಮಣಿಗಳನ್ನು
ಒಡೆದು ಹಾಕುತ್ತಿರುವ ಘಟನೆ ಮುಂದುವರೆದಿದೆ. ಇದು ಕೇವಲ ಗಾಳಿ ಸುದ್ದಿ ಎಂದು ಕೆಲವರು ಹೇಳುತ್ತಿದ್ದರೂ ಮಹಿಳೆಯರು ಮಾತ್ರ ಅದಕ್ಕೆ ಕಿವಿಗೊಡದೆ ಕೆಂಪು ಮಣಿಗಳನ್ನು ಒಡೆದು ಹಾಕುತ್ತಿದ್ದಾರೆ. ಆಷಾಡ ಮಾಸ ಬಂತೆಂದರೆ
ಏನಾದರೊಂದು ವದಂತಿ ಹರಡುವುದು ಕಳೆದ ಮೂರು ವರ್ಷದಿಂದ ಸಾಮಾನ್ಯವಾಗಿದೆ. ಇಂತಹುದೇ ಘಟನೆಗಳು ಕಂಪ್ಲಿ ಹೋಬಳಿಯಾದ್ಯಂತೆ ನಡೆದಿರುವುದಾಗಿ ವರದಿಯಾಗಿದೆ. ನಿರ್ಜೀವ ವಸ್ತುಗಳು ಮಾತನಾಡಿ ಯಾರೋ ಸಾಯುತ್ತಾರೆ ಎಂದು ಯಾರು ಸುದ್ದಿ ಹಬ್ಬಿಸಿದರೋ ದೇವರೇ ಬಲ್ಲ, ಇದರ ಹಿಂದಿರುವ ವ್ಯಕ್ತಿಗಳನ್ನು ಶಿಕ್ಷಿಸಬೇಕು, ಜನರು ಇಂತಹ ವದಂತಿಗಳಿಗ ಕಿವಿಗೊಡಬಾರದು ಎಂದು ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಹಾಗೂ ಶಿಕ್ಷಕ
ಎಸ್‌.ಎಸ್‌. ಹಿರೇಮಠ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next