ನ್ಯೂಯಾರ್ಕ್: 1903ರಂದು ರೈಟ್ ಸೋದರರು ಮೊಟ್ಟ ಮೊದಲ ಬಾರಿಗೆ ವಿಮಾನ ಹಾರಿಸಿದಾಗ, ಜಗತ್ತು ವಿಸ್ಮಯದ ಕಂಗಳಲ್ಲಿ ವೀಕ್ಷಿಸಿತ್ತು. ಅಂಥದ್ದೇ ಅಪರೂಪದ ವಿದ್ಯಮಾನವನ್ನು ನಾಸಾ ಮರಳಿ ಸೃಷ್ಟಿಸಿದೆ! ಆದರೆ ಇದು ಭೂಮಿ ಮೇಲಲ್ಲ; ಮಂಗಳನ ಮೇಲೆ!
ಅನ್ಯಗ್ರಹದ ಅಂಗಳದಿಂದ ಹೆಲಿಕಾಪ್ಟರ್ ಒಂದು ಮೇಲಕ್ಕೆ ಹಾರುತ್ತಿರುವ ದೃಶ್ಯ ಕಲ್ಪಿಸಿಕೊಳ್ಳುವುದೇ ಒಂದು ರೋಮಾಂಚನಕಾರಿ. ನಾಸಾ ಈ ಕನಸನ್ನು ನನಸು ಮಾಡಿದ್ದು, ಮಂಗಳನ ಭೂ ಮೇಲ್ಮೈನಿಂದ “ಇಂಗೆನ್ಯೂಟಿ’ ಎಂಬ ರೊಬೊಟಿಕ್ ಹೆಲಿಕಾಪ್ಟರ್ ಅನ್ನು ಕೆಲವು ಕ್ಷಣಗಳ ಮಟ್ಟಿಗೆ ಹಾರಿಸಿದೆ.
ಆ ವಿಸ್ಮಯ ಹೇಗಿತ್ತು?: ಕೆಂಪು ಗ್ರಹದ ಕೆಂಧೂಳನ್ನು ಚದುರಿಸುತ್ತಾ ಮೇಲೇರುತ್ತಾ ಹಾರಿದ ಪ್ರಾಯೋಗಿಕ ಮಾದರಿಯ “ಇಂಗೆನ್ಯೂಟಿ’ ಹೆಲಿಕಾಪ್ಟರ್, 10 ಅಡಿಗಳವರೆಗೆ ಹಾರಿದೆ. 40 ಸೆಕೆಂಡುಗಳ ಹಾರಾಟದ ಗುರಿಯನ್ನು ವಿಜ್ಞಾನಿಗಳು ಇಟ್ಟುಕೊಂಡಿದ್ದರು. ಆದರೆ, ಕೇವಲ 30 ಸೆಕೆಂಡುಗಳಲ್ಲಿ ಇದು ತನ್ನ ಹಾರಾಟ ಮುಗಿಸಿದ್ದು, ಬಾಹ್ಯಾಕಾಶದ ಇತಿಹಾಸದಲ್ಲಿ ಇದೊಂದು ಅಪೂರ್ವ ದಾಖಲೆಯಾಗಿ ಅಚ್ಚಾಗಿದೆ.
ಕ್ಲೋಸಪ್ ಕ್ಲಿಕ್: ಕ್ಯಾಲಿಫೋರ್ನಿಯಾದಲ್ಲಿನ ನಾಸಾದ ಜೆಟ್ ಪ್ರಾಪ್ಯುಲನ್ ಲ್ಯಾಬೊರೇಟರಿ ವಿಜ್ಞಾನಿಗಳು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. “ಇಂಗೆನ್ಯೂಟಿ’ ತನ್ನ ಹಾರಾಟದ ವೇಳೆ ಮಂಗಳನ ಭೂಮೇಲ್ಮೆ„ನ ಹಲವು ಚಿತ್ರಗಳನ್ನು ಕ್ಲಿಕ್ಕಿಸಿ, ಭೂಮಿಗೆ ರವಾನಿಸಿದೆ. ಅಲ್ಲದೆ, ಇತ್ತೀಚೆಗಷ್ಟೇ ಮಂಗಳವನ್ನು ತಲುಪಿರುವ ಪರ್ಸಿವೆರನ್ಸ್ ನೌಕೆ, ರೊಬೊಟಿಕ್ ಹೆಲಿಕಾಪ್ಟರ್ ಹಾರಾಟದ ದೃಶ್ಯಾವಳಿಗಳನ್ನು ಸೆರೆಹಿಡಿದಿದೆ. ಸಾಕಷ್ಟು ವರ್ಷಗಳ ಹಿಂದೆ ಮಂಗಳನ ಮೇಲೆ ಇದ್ದಿರ ಬಹುದಾದ ನದಿಯ ಮುಖಜ ಭೂಮಿ ಯಲ್ಲಿ ಇಂಗೆನ್ಯೂಟಿ ಹಾರಾಟ ನಡೆಸಿದೆ. ಇಲ್ಲಿನ ಶಿಲಾ ಮಾದರಿಗಳನ್ನೂ “ಇಂಗೆನ್ಯೂಟಿ’ ಸಂಗ್ರಹಿಸುತ್ತಿದೆ.