ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಎಡಿಜಿಪಿ ಪ್ರತಾಪ್ ರೆಡ್ಡಿ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ತನಿಖೆ ಪ್ರಗತಿ ಬಗ್ಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಮಾಹಿತಿ ಪಡೆದಿದ್ದಾರೆ.
ಅತ್ಯಾಚಾರ ನಡೆದ ಸ್ಥಳದಲ್ಲಿ ಈ ಹಿಂದೆ ಆಗಿರುವ ಕೆಲವು ಘಟನೆಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಮದ್ಯ ಪಾರ್ಟಿಗಳು ನಡೆಯುತ್ತಿದ್ದವೆ? ಯುವಕ, ಯುವತಿ ಈ ಸ್ಥಳಕ್ಕೆ ಬರುವುದಕ್ಕೆ ಕಾರಣವೇನು? ಪ್ರತಿಯೊಂದು ವಿಚಾರದ ಬಗ್ಗೆಯೂ ಎಡಿಜಿಪಿ ಪ್ರತಾಪ್ ರೆಡ್ಡಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೈಸೂರು: ವಿದ್ಯಾರ್ಥಿನಿಯ ಅತ್ಯಾಚಾರ ಮಾಡಿ 3 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಕಿರಾತಕರು!
ಮೊಬೈಲ್ ಟವರ್ ಲೊಕೇಶನ್ ನಿಂದ ಆರೋಪಿ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದು ಸದ್ಯ ಸ್ಥಳದಲ್ಲಿ ಸಾವಿರಾರು ಮೊಬೈಲ್ ನಂಬರ್ ಬಳಕೆಯಾಗಿರುವುದು ಪತ್ತೆಯಾಗಿದೆ. ಮೊಬೈಲ್ ನಂಬರ್ ಗಳನ್ನು ಫಿಲ್ಟರ್ ಮಾಡಲಾಗುತ್ತಿದೆ. ಮೊದಲಿಗೆ ಸಂತ್ರಸ್ತೆಯ ಸ್ನೇಹಿತನ ಮೊಬೈಲ್ ಬಳಕೆಯಾಗಿರುವ ಸುಳಿವು ಸಿಕ್ಕಿರಲಿಲ್ಲ. ಇಂದು ಯುವಕ ನಂಬರ್ ಬಳಕೆ ಮಾಹಿತಿ ಸಿಕ್ಕಿದೆ. ಸದ್ಯ ನಂಬರ್ ಆಧಾರದಲ್ಲಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.