ವಿಜಯಪುರ: ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ಹೆದ್ದಾರಿ ಬಂದ್ ಹೋರಾಟಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಗರದ ಸೋಲಾಪುರ ಹೆದ್ದಾರಿ ಬಳಿ ಬಲವಂತವಾಗಿ ತರಕಾರಿ ಮಾರುಕಟ್ಟೆ ತೆರವುಗೊಳಿಸಿದರು. ಪೊಲೀಸರ ಈ ಕ್ರಮಕ್ಕೆ ಹಳ್ಳಿಯಿಂದ ಆಗಮಿದ್ದ ರೈತರಿಂದ ಆಕ್ರೋಶ ವ್ಯಕ್ತವಾಯಿತು.
ಹಿಂದಿನಂತೆ ಗ್ರಾಮೀಣ ಭಾಗದ ರೈತರು ಶುಕ್ರವಾರ ನಸುಕಿನಲ್ಲೇ ನಗರದ ಹೊರ ಭಾಗದಲ್ಲಿ ಇರುವ ಸೋಲಾಪುರ ರಸ್ತೆಯ ಬದಿಯಲ್ಲಿ ತರಕಾರಿ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ತಂದಿದ್ದರು.
ಕೆಲವೇ ಸಮಯದಲ್ಲಿ ಲಾಠಿ ಹಿಡಿದು ಸ್ಥಳಕ್ಕೆ ಆಗಮಿಸಿ ಪೊಲೀಸರು, ಇಂದು ರೈತ ಸಂಘಟನೆಗಳು ಹೆದ್ದಾರಿ ರಸ್ತೆ ಸಂಚಾರ ಸ್ಥಗಿತದ ಮೂಲಕ ಹೆದ್ದಾರಿ ಬಂದ್ ಕರೆ ನೀಡಿವೆ. ಹೀಗಾಗಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ, ಕೂಡಲೇ ಇಲ್ಲಿಂದ ಹೊರಟು ಹೋಗಿ ಎಂದು ಬಲವಂತದಿಂದ ತರಕಾರಿ ವಹಿವಾಟು ತೆರವು ಮಾಡಿಸಿದರು.
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ
ಇದರಿಂದಾಗಿ ಹಳ್ಳಿಗಳಿಂದ ನಗರಕ್ಕೆ ತರಕಾರಿ ಉತ್ಪನ್ನ ತಂದಿದ್ದ ರೈತರು, ಬೀದಿಬದಿ ತರಕಾರಿ ವ್ಯಾಪಾರಿಗಳು ಕಂಗಾಲಾಗಿ, ಬಂದ್ ಕರೆ ನೀಡಿದ ರೈತ ಸಂಘಟನೆಗಳು ಹಾಗೂ ಸಂತೆ ತೆರವು ಮಾಡಿಸಿದ ಪೊಲೀಸರ ಕ್ರಮಕ್ಕೆ ಆಕ್ರೋಶ ಹೊರಹಾಕಿದರು.