ಬೆಂಗಳೂರು: ಜಪ್ತಿ ಮಾಡಿಕೊಳ್ಳಲಾದ 50 ಲಕ್ಷ ರೂ.ಗಳಲ್ಲಿ 10 ಲಕ್ಷ ರೂ.ಗಳನ್ನು ತಾನೇ ಇಟ್ಟುಕೊಂಡಿದ್ದ ಆರೋಪದ ಮೇಲೆ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಂದ್ರ ಗೌಡ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ ಆರೋಪಿ ತನ್ನ ಗಸ್ತು ಕರ್ತವ್ಯದ ವೇಳೆ ಈ ಕೃತ್ಯ ಎಸಗಿದ್ದು, ಚನ್ನಪಟ್ಟಣ ಪಟ್ಟಣದ ರಾಮಾಪುರ ಗ್ರಾಮದ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ರೈತ ಲಿಂಗೇಶ್ ಅವರಿಗೆ ಸೇರಿದ 10 ಲಕ್ಷ ರೂ.ಗಳನ್ನು ಹಣವನ್ನು ಪಡೆದುಕೊಂಡಿದ್ದಾನೆ.
ಲಿಂಗೇಶ್ ತನ್ನ ಸ್ನೇಹಿತನ ಸಲಹೆಯಂತೆ 2000 ರೂಪಾಯಿ ಮುಖಬೆಲೆಯ ಹಣವನ್ನು ಬದಲಾಯಿಸಲು ನಗರಕ್ಕೆ ತಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಲಿಂಗೇಶ್ ಸ್ನೇಹಿತ ದಿನೇಶ್ 2000 ರೂ. ನೋಟುಗಳನ್ನು ಬ್ಯಾನ್ ಮಾಡುವುದಾಗಿ ತಿಳಿಸಿದ್ದು, 10 ಪರ್ಸೆಂಟ್ ಕಮಿಷನ್ ಪಡೆಯಲು 500 ರೂಪಾಯಿ ಮುಖಬೆಲೆಯ ನೋಟುಗಳಿಗೆ ಬದಲಾಯಿಸುವಂತೆ ಸೂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಲಿಂಗೇಶ್ ಅವರು ತಮ್ಮ ಕಾರಿನಲ್ಲಿ 50 ಲಕ್ಷ ರೂಪಾಯಿಯೊಂದಿಗೆ ಬೆಂಗಳೂರಿಗೆ ಬಂದಿದ್ದರು. ನೋಟು ಬದಲಾಯಿಸಿಕೊಳ್ಳಲು ಬಂದವರ ಸಲಹೆಯಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾಭಾರತಿ ಕ್ಯಾಂಪಸ್‌ಗೆ ಬಂದಿದ್ದು, ನಂತರ ಹಣ ವಿನಿಮಯಕ್ಕಾಗಿ ಚಂದ್ರಾ ಲೇಔಟ್‌ಗೆ ತೆರಳಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಹೆಡ್ ಕಾನ್‌ಸ್ಟೆಬಲ್ ಮಹೇಂದ್ರ ಗೌಡ ಅನುಮಾನಗೊಂಡು ಕಾರನ್ನು ಪರಿಶೀಲಿಸಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಎಲ್ಲಾ ಹಣವನ್ನು ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿ 10 ಲಕ್ಷ ರೂ.ತಾನು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಲಿಂಗೇಶ್ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಹೆಡ್ ಕಾನ್‌ಸ್ಟೆಬಲ್ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಅದರ ನಂತರ ಅವರನ್ನು ಬಂಧಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆ. ಅವರ ಪಾತ್ರ ಇನ್ನಷ್ಟೇ ಹೊರಬರಬೇಕಿದೆ. ನೋಟು ವಿನಿಮಯದ ಬಗ್ಗೆ ವಿವರವಾದ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.