Advertisement

ಸಮನ್ವಯ ಸಮಿತಿ ಸಿದ್ದರಾಮಯ್ಯ ಕೈಗೊಂಬೆ

11:31 PM Jun 04, 2019 | Lakshmi GovindaRaj |

ಬೆಂಗಳೂರು: “ಹಳ್ಳಿಹಕ್ಕಿ’ ಖ್ಯಾತಿಯ ಹಿರಿಯ ರಾಜಕಾರಣಿ ಎಚ್‌.ವಿಶ್ವನಾಥ್‌ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ಪತ್ರ ಬರೆದು ತಮ್ಮ ಒಡಲಾಳದ ನೋವನ್ನು ತೋಡಿಕೊಂಡಿದ್ದಾರೆ. ಇದೇ ವೇಳೆ, ಪಕ್ಷದ ಕಾರ್ಯಕರ್ತರು, ರಾಜಕೀಯದಲ್ಲಿನ ಹಿತೈಷಿಗಳಿಗೂ ಬಹಿರಂಗ ಪತ್ರ ಬರೆದಿದ್ದಾರೆ.

Advertisement

ಹಿತೈಷಿಗಳಿಗೆ ಬರೆದ ಪತ್ರದ ಸಾರಾಂಶ: ನೀವೆಲ್ಲಾ ನನ್ನನ್ನು ದಶಕಗಳಿಂದ ಬಲ್ಲಿರಿ. ನಾನೋ ಶುದ್ಧ ಹಳ್ಳಿಹಕ್ಕಿ. ಸ್ವಚ್ಚಂದ ಸ್ವರ-ರಾಗಗಳನ್ನು ಹಾಡಿಕೊಳ್ಳಬಯಸುವವನು. ರಾಜಕಾರಣ ನನ್ನ ಆಡೊಂಬಲ, ಹಾರಾಟದ ಗಗನ. ಕಾಂಗ್ರೆಸ್‌ನಲ್ಲಿ ಬೆಳೆದು, ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ಅಧಿಕಾರದ ಅನುಭವಗಳಿಸಿ ಮಾಗಿ, ಪಕ್ವಗೊಂಡು ಅಲ್ಲಿನ ಪಲ್ಲಟಗಳನ್ನು ಒಪ್ಪಲಾಗದೆ ಹೊರ ಬಂದವನು. ಆಗ, ಈ ಕನ್ನಡ ನೆಲದ ಪಕ್ಷ, ಜಾತ್ಯತೀತ ಸಿದ್ಧಾಂತದ ತಳಹದಿಯ ಮೇಲೆ ಬೆಳೆದು ನಿಂತ ಜೆಡಿಎಸ್‌ ನನ್ನ ಸರಿಯಾದ ಆಯ್ಕೆಯೇ ಆಗಿತ್ತು. ಆಗ ಸನ್ಮಾನ್ಯ ದೇವೇಗೌಡರು, ಕುಮಾರಸ್ವಾಮಿಯವರು, ರೇವಣ್ಣನವರು ಮತ್ತು ಪಕ್ಷದ ಪ್ರಮುಖರು ನನ್ನನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡು ಗೌರವಾದರಗಳ ಅಭಿಮಾನ ತೋರಿದ್ದಕ್ಕಾಗಿ ನಾನು ಎಲ್ಲರಿಗೂ ಋಣಿಯಾಗಿದ್ದೇನೆ.

ಪಕ್ಷಕ್ಕೆ ಹೊಸಗಾಳಿ, ಹೊಸನೀರು ಬರಲಿ: ಇತ್ತೀಚಿನ ಲೋಕಭಾ ಚುನಾವಣಾ ಫ‌ಲಿತಾಂಶ ನಾವು ಆತ್ಮಾವಲೋಕನವಷ್ಟೇ ಅಲ್ಲದೆ ನಮ್ಮ ನಡೆ ನುಡಿಗಳು, ಕಾರ್ಯವೈಖರಿ ಹಾಗೂ ಉದ್ದೇಶಗಳನ್ನು ತಿದ್ದಿಕೊಳ್ಳುವ ಅಗತ್ಯವನ್ನು ಗಟ್ಟಿಯಾಗಿಯೇ ತಿಳಿಸಿದೆ. ನನ್ನ ಪಕ್ಷ ಸೋಲು ಕಂಡಿರುವುದನ್ನು ಕಂಡು ನೊಂದು ಅದರ ನೈತಿಕ ಜವಾಬ್ದಾರಿ ಹೊತ್ತು ನಾನು, ಪಕ್ಷದ ಪ್ರಮುಖರಿಗೆ ನನ್ನ ರಾಜೀನಾಮೆ ಪತ್ರ ಕಳುಹಿಸಿರುತ್ತೇನೆ. ಪಕ್ಷಕ್ಕೆ ಹೊಸಗಾಳಿ, ಹೊಸನೀರು, ಹೊಸಶಕ್ತಿ ಲಭಿಸಿ ಮತ್ತೆ ಅದು ಹೊಸ ರೂಪ ಪಡೆದು ಹಸಿರುಟ್ಟು ನಳನಳಿಸಿ ಕನ್ನಡಿಗರ ಮನಗೆಲ್ಲಲಿ. ಎಂದಿನಂತೆ ಪಕ್ಷಕ್ಕೂ ನನ್ನ ಮತದಾರರಿಗೂ ನಿಷ್ಠನಾಗಿ ಪಕ್ಷ ಒಪ್ಪಿಸಿದ ಜವಾಬ್ದಾರಿಗಳನ್ನು ಮನಸ್ಸಿಟ್ಟು ನಿರ್ವಹಿಸುತ್ತೇನೆ. ನನ್ನ ಪಕ್ಷದ ವರಿಷ್ಠರಿಗೆ, ಮಾನ್ಯ ಮುಖ್ಯಮಂತ್ರಿಯವರಿಗೆ, ಎಲ್ಲ ಕಾರ್ಯಕರ್ತರಿಗೆ ವಂದನೆಗಳು.

ಗೌಡರಿಗೆ ಬರೆದ ಪತ್ರದಲ್ಲಿ ಏನಿದೆ?: ತಾವು ನನ್ನಲ್ಲಿ ವಿಶ್ವಾಸವಿಟ್ಟು ಜನತಾದಳದ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದು, ನನ್ನ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದೇ ನಾನು ಭಾವಿಸಿದ್ದೇನೆ. ಸ್ವಾಭಿಮಾನದ ಸಂಕೇತವಾಗಿ ನನ್ನ ಮಾತೃ ಪಕ್ಷ ಕಾಂಗ್ರೆಸ್‌ನಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿ ಆಚೆ ಬಂದು ನಿಂತಾಗ ನನ್ನ ಅಭಿಲಾಷೆಯಂತೆ ನನಗೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪುನರ್‌ ಜನ್ಮಕ್ಕೆ ಆಶೀರ್ವಾದ ಮಾಡಿದ್ದೀರಿ. ಅದಕ್ಕೆ ನಾನು ನಿಮಗೆ ಕೃತಜ್ಞನಾಗಿದ್ದೇನೆ.

ಅಸಂಗತ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಯಿತು, ಸಾಲ ಮನ್ನಾದಂತಹ ಬೃಹತ್‌ ಯೋಜನೆಯನ್ನು ಹೆಗಲ ಮೇಲೆ ಹೊತ್ತ ಮುಖ್ಯಮಂತ್ರಿಗಳು ಆಡಳಿತದ ಅಭದ್ರತೆಯ ಸಂಕಷ್ಟದಲ್ಲೂ ಜನರ ನಡುವೆ “ನಮ್ಮ ಕುಮಾರಣ್ಣ’ ಎಂಬ ಭಾವನಾತ್ಮಕ ಸಂಪ್ರೀತಿಯಲ್ಲಿದ್ದರು. ಒಂದೆರಡು ಇಲಾಖೆಗಳನ್ನು ಬಿಟ್ಟರೆ ನಿರೀಕ್ಷಿಸಿದ ಸಾಧನೆಗಳು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಪಕ್ಷದ ಅಧ್ಯಕ್ಷನಾಗಿ ನನಗೆ ನಿರಾಸೆಯಾಗಿದೆ ಎನ್ನಲು ಸಂಕಟವಾದರೂ ಹೇಳುವುದು ಅನಿವಾರ್ಯವಾಗಿದೆ. ಆದರೂ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಅನಾರೋಗ್ಯದ ಮತ್ತು ಮಿತ್ರರ ಕಿರುಕುಳದ ನಡುವೆಯೂ ಎಲ್ಲರ ವಿಶ್ವಾಸದಿಂದ ಶಕ್ತಿ ಮೀರಿ ಸರ್ಕಾರವನ್ನು ನಡೆಸುತ್ತಿದ್ದಾರೆ.

Advertisement

ತುಮಕೂರು ಖೆಡ್ಡಾಕ್ಕೆ ನಿಮ್ಮನ್ನು ಬೀಳಿಸಿದರು: ಸಾಮಾನ್ಯವಾಗಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂತ್ರಿಗಳಾದವರು, ಶಾಸಕರು ಪಕ್ಷದ ಮಟ್ಟಿಗೆ ಅಷ್ಟೊಂದು ಆಸಕ್ತಿಯನ್ನು ಹೊಂದಿರುವುದಿಲ್ಲ. ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ತಾವು ಸೋಲಿನ ನೋವುಣ್ಣಬೇಕಾಗಿ ಬಂದಿದ್ದು, ನನಗೆ ಹಾಗೂ ಪಕ್ಷಕ್ಕೆ ತೀವ್ರ ನೋವಿನ ಸಂಗತಿಯಾಗಿದೆ. ಮೈಸೂರು ಲೋಕಸಭೆ ಕ್ಷೇತ್ರದಿಂದ ಅವಕಾಶ ಕೊಡಿ ಎಂಬ ನಮ್ಮ ಕೂಗಿಗೆ ಕಾಂಗ್ರೆಸ್ಸಿಗರು ಓಗೋಡದೆ ಹಾಲಿ ಕಾಂಗ್ರೆಸ್‌ ಸದಸ್ಯರ ಸ್ಥಾನದಲ್ಲಿ ನಿಮ್ಮನ್ನು ಸ್ಪರ್ಧಿಸುವಂತಹ ತಂತ್ರ ಹೆಣೆಯಲಾಯಿತು.

ತುಮಕೂರು ಕ್ಷೇತ್ರದ ಖೆಡ್ಡಾಕ್ಕೆ ಕೆಡವಿ ಚುನಾವಣೆಯಲ್ಲಿ ಅವಮಾನಕರ ಸೋಲು ಅನುಭವಿಸುವಂತೆ ಮಾಡಲಾಯಿತು. ನಿಮ್ಮ ಸೋಲು ನಾಡಿನ ಸೋಲಾಯಿತು. ನಾಡಿನ ಹಿತಕ್ಕೆ ಮಾರಕವಾಯಿತು. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿಯೂ ಸಹ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಮಾಜಿ ಶಾಸಕರುಗಳು, ಜೆಡಿಎಸ್‌ನ ಹಿರಿಯ ಜನಪ್ರತಿನಿಧಿಗಳ ಜವಾಬ್ದಾರಿಯಿಲ್ಲದ ಕೊಂಕು ನುಡಿಗಳು, ವಿಚಲಿತವಾದ ಅಹಿಂದ ಮತಗಳು ನಮ್ಮ ಸ್ಪರ್ಧಿ ನಿಖೀಲ್‌ ಕುಮಾರಸ್ವಾಮಿಯವರ ಸೋಲಿಗೆ ಕಾರಣವಾದವು.

ನಾಮ್‌ಕಾವಾಸ್ತೆಯ ಸಮನ್ವಯ ಸಮಿತಿ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರದ ಸಮನ್ವಯ ಸಮಿತಿ ಕೇವಲ ನಾಮ್‌ಕಾವಾಸ್ತೆ ಸಮನ್ವಯ ಸಮಿತಿ ಆಯಿತೇ ಹೊರತು, ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಫ‌ಲವಾಗಲೇ ಇಲ್ಲ. ಸಮನ್ವಯ ಸಮಿತಿ ಸುಲಲಿತವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಈವರೆಗೆ ರೂಪಿಸಲು ಸಾಧ್ಯವಾಗಿಲ್ಲ. ಸಮನ್ವಯ ಸಮಿತಿಯಲ್ಲಿ ಜೆಡಿಎಸ್‌ ಅಧ್ಯಕ್ಷನಾದ ನನಗೆ ಅವಕಾಶವನ್ನೇ ನೀಡಲಿಲ್ಲ. ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆಯಂತೆ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತೇ ಹೊರತು, ಸೌಹಾರ್ದಯುತ ವಾತಾವರಣದಲ್ಲಿ ನಿರಾತಂಕವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ನಡೆಯಲೇ ಇಲ್ಲ.

ಪಕ್ಷದ ಅಧ್ಯಕ್ಷನಾದ ನನಗಾಲಿ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗಾಗಲಿ ಸಮನ್ವಯ ಸಮಿತಿಯಲ್ಲಿ ಧ್ವನಿಯೇ ಇಲ್ಲದಂತಾಯಿತು. ಇಂತಹ ಸಂದರ್ಭದಲ್ಲಿ ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ ಹುಣಸೂರು ಕ್ಷೇತ್ರದ ಜನರಿಗೆ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ವಿನಮ್ರವಾಗಿ ಕೋರುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next