Advertisement

ಅಡುಗೆ ಅನಿಲ ಪರೀಕ್ಷೆ: ಗ್ರಾಹಕರಲ್ಲಿ ಗೊಂದಲ

01:09 AM Jan 31, 2020 | Team Udayavani |

ಕುಂದಾಪುರ: ಅಡುಗೆ ಅನಿಲ ಹೊಂದಿದ ಗ್ರಾಹಕರ ಮನೆ ಮನೆಗೆ ತೆರಳಿ ವಿವಿಧ ತಂಡದವರು ತಪಾಸಣೆ ನಡೆಸುತ್ತಿದ್ದು ಜನರಲ್ಲಿ ಮಾಹಿತಿ ಇಲ್ಲದೆ ಗೊಂದಲ ಉಂಟಾಗಿದೆ. ಈ ಕುರಿತು ಗೊಂದಲ ಅನಗತ್ಯ ಎಂದು ಇಲಾಖೆ, ಗ್ಯಾಸ್‌ ವಿತರಕರು ಸ್ಪಷ್ಟಪಡಿಸಿದ್ದಾರೆ.

Advertisement

ಮನೆಮನೆಗೆ ಭೇಟಿ
ಅಡುಗೆ ಅನಿಲ ಹೊಂದಿದ ಮನೆಗಳಿಗೆ ವಿವಿಧ ಅಡುಗೆ ಅನಿಲ ವಿತರಕ ಕಂಪೆ‌ನಿಗಳ ಪರವಾಗಿ ಸಿಬಂದಿ ತೆರಳಿ ಅಲ್ಲಿ ಅಡುಗೆ ಅನಿಲದ ಸಂಪರ್ಕ, ಪೈಪ್‌, ಸ್ಟವ್‌, ಗ್ಯಾಸ್‌ ಸಿಲಿಂಡರ್‌ ಇಟ್ಟ ಸ್ಥಳ ಇತ್ಯಾದಿ ಪರಿಶೀಲಿಸುತ್ತಾರೆ. ಐದು ಹಂತಗಳ ಚೆಕ್‌ಲಿಸ್ಟ್‌ ನಡೆಸಿ ಅದಕ್ಕೆ ಗ್ರಾಹಕರ ಸಹಿ ಪಡೆಯುತ್ತಾರೆ. ಅನಿಲ ಪೈಪ್‌ ಬದಲಿಸ ಬೇಕಿದ್ದರೆ ಬದಲಾಯಿಸುತ್ತಾರೆ. ಹಾಗೆ ಬಂದು ಹೋಗುವ ಅವರು 200 ರೂ. ತಪಾಸಣೆ ಶುಲ್ಕ ಎಂದು ಪಡೆಯುತ್ತಿದ್ದಾರೆ. ಪೈಪ್‌ ಹಾಕಿದರೆ ಅದರ ದರ ಪ್ರತ್ಯೇಕ ವಿಧಿಸುತ್ತಾರೆ.

ಗೊಂದಲ
ಅಡುಗೆ ಅನಿಲ ಸಂಪರ್ಕದಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೂ ತಪಾಸಣಾ ಶುಲ್ಕ ಪಡೆಯುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿದೆ. ಈ ಮಧ್ಯೆ ಕೆಲವರು ಪಡೆದ ಹಣಕ್ಕೆ ರಸೀದಿ ನೀಡಿಲ್ಲ ಎಂದು ಆಪಾದಿಸಿದ್ದು ಇದರಿಂದ ಗೊಂದಲ ಇನ್ನಷ್ಟು ಹೆಚ್ಚಾಗಿದೆ. ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ 200 ರೂ. ತಪಾಸಣಾ ಶುಲ್ಕ, ಪೈಪ್‌ ಬದಲಾವಣೆ ಇದ್ದರೆ ಹೆಚ್ಚುವರಿ 190 ರೂ. ಶುಲ್ಕ ಎಂದು ಒಟ್ಟು 390 ರೂ. ವರೆಗೆ ಆಗುತ್ತದೆ. ಇದು ದುಬಾರಿ ಎನಿಸಿದೆ ಎನ್ನುತ್ತಾರೆ ಕೋಟೇಶ್ವರದ ರಾಜೇಶ್‌ ಅವರು. ರಸೀದಿ ಕೊಡದ ಕಾರಣ ಇದರಲ್ಲೇನೋ ಗೋಲ್‌ಮಾಲ್‌ ಇದೆ ಎಂದು ಜನ ಭಾವಿಸಿದ್ದಾರೆ. ಈ ಕುರಿತು ಗ್ರಾಹಕರು ಅಡುಗೆ ಅನಿಲ ವಿತರಕ ಸಂಸ್ಥೆಗಳನ್ನು ಸಂಪರ್ಕಿಸಿದಾಗ ಇದು ಕಡ್ಡಾಯವಾಗಿ ಮಾಡಿಸಬೇಕಾದ ತಪಾಸಣೆ ಎಂದಿದ್ದಾರೆ.

ಏನಿದು ತಪಾಸಣೆ
ಅಡುಗೆ ಅನಿಲ ವಿತರಕ ಕಂಪನಿಗಳ ಪರವಾಗಿ ಅಡುಗೆ ಅನಿಲ ಸಂಪರ್ಕ ಪಡೆದ ಪ್ರತಿ ಮನೆಯಲ್ಲೂ ತಪಾಸಣೆ ನಡೆಸಲಾಗುತ್ತದೆ. ಹೀಗೆ ತಪಾಸಣೆ ನಡೆಸಿದ ಬಳಿಕ ಅದನ್ನು ಕಂಪನಿಗೆ ಕಳುಹಿಸಲಾಗುತ್ತದೆ. ಈ ಮೊದಲು ಪ್ರತಿ 2 ವರ್ಷಗಳಿಗೊಮ್ಮೆ ತಪಾಸಣೆ ನಡೆಯುತ್ತಿತ್ತು. ಈಗ ಅದನ್ನು 5 ವರ್ಷಗಳಿಗೊಮ್ಮೆ ಎಂದು ವಿಸ್ತರಿಸ ಲಾಗಿದೆ.
ವಿಮೆಅಡುಗೆ ಅನಿಲ ಸಂಪರ್ಕ ಪಡೆದ ಕೂಡಲೇ ಪ್ರತೀ ಗ್ರಾಹಕರೂ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ. ಗ್ರಾಹಕರ ತಪ್ಪುಗಳ ಹೊರತಾದ ಅನಿಲ ವಿತರಕ ಸಂಸ್ಥೆಯವರ ತಪ್ಪಿನಿಂದ ನಡೆದ ಆಕಸ್ಮಿಕ ಘಟನೆಯಾದರೆ ಅಂತಹ ಅನಾಹುತಗಳಿಗೆ ವಿಮಾ ಸೌಲಭ್ಯ ಇರುತ್ತದೆ. ಹಾಗೆ ವಿಮೆ ಪಡೆಯಲು ಕೂಡ ಇಂತಹ ತಪಾಸಣೆ ಅವಶ್ಯ. ಎಲ್ಲ ಸೌಕರ್ಯ ಸಮರ್ಪಕವಾಗಿದ್ದರೂ ಅನಾಹುತ ಸಂಭವಿಸಿದೆ ಎಂದು ಭಾವಿಸಿ ಯಾರ ತಪ್ಪು ಎಂದು ನಿಷ್ಕರ್ಷೆ ಮಾಡಲಾಗುತ್ತದೆ. ಅದರ ಹೊರತಾಗಿ ತಪಾಸಣೆಗೂ ವಿಮೆಗೂ ನೇರ ಸಂಬಂಧ ಇಲ್ಲ, ತಪಾಸಣೆ ಮಾಡಿದ ಬಳಿಕವಷ್ಟೇ ವಿಮೆ ವ್ಯಾಪ್ತಿಗೆ ಒಳಪಡುವುದು ಎಂಬ ಗೊಂದಲವೂ ಬೇಕಿಲ್ಲ ಎನ್ನುತ್ತಾರೆ ವಿತರಕರು.

ಕಡ್ಡಾಯ ತಪಾಸಣೆ
ಅನಿಲ ವಿತರಕ ಸಂಸ್ಥೆಗಳ ಸೂಚನೆಯಂತೆ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯ ಎಲ್ಲ ಮಾಹಿತಿಗಳನ್ನೂ ವಿತರಕ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ. ದೂರುಗಳಿದ್ದರೆ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ಯಾವುದೇ ಗೊಂದಲ ಅಗತ್ಯ ಇಲ್ಲ.
-ಪ್ರವೀಣ್‌ ಕುಮಾರ್‌, ಆಂಜನೇಯ ಗ್ಯಾಸ್‌ ಏಜೆನ್ಸಿ, ಕುಂದಾಪುರ

Advertisement

ದೂರು ನೀಡಿ
ಎಲ್ಲ ಅನಿಲ ವಿತರಕ ಸಂಸ್ಥೆಯವರು ಮನೆಗಳಿಗೆ ತಪಾಸಣೆ ನಡೆಸುತ್ತಿದ್ದು ತಪಾಸಣಾ ಶುಲ್ಕ ಎಂದು 200 ರೂ. ವಿಧಿಸುತ್ತಿದ್ದಾರೆ. ಹಾಗೆ ಶುಲ್ಕ ಪಡೆದಾಗ ರಸೀದಿ ನೀಡದೇ ಇದ್ದರೆ ಸಂಬಂಧಪಟ್ಟ ವಿತರಕ ಸಂಸ್ಥೆಗೆ ದೂರು ನೀಡಬಹುದು. ಸಂಭಾವ್ಯ ಘಟನೆಗಳಿಗೆ ತಪಾಸಣೆ ನಡೆಸಿದವರೇ ಜವಾಬ್ದಾರರಾಗುತ್ತಾರೆ.
-ಪ್ರಕಾಶ್‌ , ಆಹಾರ ಶಾಖೆ ಉಪತಹಶೀಲ್ದಾರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next