Advertisement

ಶಾಲಾ ಮಕ್ಕಳ ಖಾತೆ ಸೇರದ ಕುಕ್ಕಿಂಗ್‌ ಕಾಸ್ಟ್‌ !

02:02 AM Nov 27, 2021 | Team Udayavani |

ಕಾರ್ಕಳ: ಕೋವಿಡ್‌ ಸಂದರ್ಭ ಭೌತಿಕ ತರಗತಿಗಳಿಂದ ದೂರವಿದ್ದ ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ 2 ತಿಂಗಳ ಅಡುಗೆ ಪರಿವರ್ತನ ವೆಚ್ಚ (ಕುಕ್ಕಿಂಗ್‌ ಕಾಸ್ಟ್‌)ವನ್ನು ಹಣದ ರೂಪದಲ್ಲಿ ನೀಡುವುದಾಗಿ ಸರಕಾರ ಹೇಳಿ 6 ತಿಂಗಳು ಕಳೆದರೂ ಹಣ ಮಕ್ಕಳ ಖಾತೆಗೆ ಸೇರಿಲ್ಲ. ಇದು ಘೋಷಣೆಗಷ್ಟೇ ಸೀಮಿತವಾಗಿರುವುದು ಮಕ್ಕಳಲ್ಲಿ, ಪೋಷಕರಲ್ಲಿ ಬೇಸರ ತರಿಸಿದೆ.

Advertisement

ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯದ ನಿರ್ದೇಶನದಂತೆ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕುಕ್ಕಿಂಗ್‌ ಕಾಸ್ಟ್‌ ಹಣ ನೀಡುವ ಬಗ್ಗೆ ಸರಕಾರ ಘೋಷಿಸಿತ್ತು.

2021ನೇ ಸಾಲಿನ ಮೇ, ಜೂನ್‌ ತಿಂಗಳ 50 ದಿನಗಳ ಬಿಸಿಯೂಟ ತಯಾರಿಗೆ ತಗಲುವ ವೆಚ್ಚವನ್ನು ಮಕ್ಕಳ ಖಾತೆಗೆ ಜಮೆ ಮಾಡಬೇಕಿತ್ತು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಜು. 15ರಂದು ಶಾಲೆಗಳಿಗೆ ಸುತ್ತೋಲೆ ಕಳುಹಿಸಿತ್ತು. ಕೋವಿಡ್‌ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಪೌಷ್ಟಿಕಾಂಶ ಅಗತ್ಯವಿದ್ದು ಅದಕ್ಕೆ ಈ ಮೊತ್ತವನ್ನು ಬಳಸಬೇಕು ಎಂದೂ ಸೂಚಿಸಲಾಗಿತ್ತು.

ಇದನ್ನೂ ಓದಿ:ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

1ರಿಂದ 5ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಪ್ರತೀ ದಿನದ ಅಡುಗೆ ತಯಾರಿ ವೆಚ್ಚ 4.97 ರೂ.ಗಳಂತೆ 250 ರೂ. ಹಾಗೂ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತೀ ದಿನದ ವೆಚ್ಚ 7.45 ರೂ.ಗಳಂತೆ 390 ರೂ. ನೀಡುವುದಾಗಿ ಸರಕಾರ ಹೇಳಿತ್ತು. ದ.ಕ. ಜಿಲ್ಲೆಯಲ್ಲಿ 1,13,147, ಉಡುಪಿ ಜಿಲ್ಲೆಯಲ್ಲಿ 57,387 ಸೇರಿದಂತೆ ರಾಜ್ಯದ 40,53,332 ವಿದ್ಯಾರ್ಥಿಗಳು ಇದರ ಫ‌ಲಾನುಭವಿಗಳಾಗಲಿದ್ದಾರೆ.

Advertisement

ಏನು ತೊಂದರೆ?
ಮಕ್ಕಳಿಗೆ ಕುಕ್ಕಿಂಗ್‌ ಕಾಸ್ಟ್‌ ನೀಡಲು ಸರಕಾರ ಹಣ ಮೀಸಲಿರಿಸಿದೆ. ಶಾಲಾ, ತಾಲೂಕು, ಜಿಲ್ಲಾ ಹಂತದಿಂದ ಮಕ್ಕಳ ಖಾತೆಗೆ ಸಂಬಂಧಿಸಿದ ಮಾಹಿತಿ ಸಂದೇಶಗಳು ತಂತ್ರಾಂಶದಲ್ಲಿ ದಾಖಲುಗೊಂಡು ರಾಜ್ಯಮಟ್ಟದ ತಂತ್ರಾಶಕ್ಕೆ ವರ್ಗಾವಣೆಯಾಗಿದೆ. ಮಕ್ಕಳ ಆಧಾರ್‌ ಕಾರ್ಡ್‌ ಅಥೆಂಟಿಕೇಶನ್‌ ಪರಿಶೀಲನೆ, ಅಕೌಂಟ್ಸ್‌ ಮತ್ತು ಅಧಾರ್‌ ಹೊಂದಾಣಿಕೆ ಪರಿಶೀಲನೆಗಳು ಆಗಬೇಕಿವೆ. ನೇರಾ ನಗದು ವರ್ಗಾವಣೆ ತಂತ್ರಾಂಶದಲ್ಲಿ ತಾಂತ್ರಿಕ ತೊಂದರೆಗಳಿಂದ ಇದೆಲ್ಲವೂ ನಿಧಾನಗತಿಯಲ್ಲಿ ಸಾಗಿದ್ದು, ಹಣ ಪಾವತಿ ವಿಳಂಬವಾಗುತ್ತಿದೆ. ಮಕ್ಕಳು ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 25 ಸಾವಿರ ಮಕ್ಕಳ ಖಾತೆಗಷ್ಟೇ ಜಮೆ ಆಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಆಧಾರ್‌ ಅಥೆಂಟಿಕೇಶನ್‌ ಆದ ಎಲ್ಲ ಮಕ್ಕಳದ್ದು ಪೇಮೆಂಟ್‌ ಮಾಡುತ್ತಿ ದ್ದೇವೆ. ಅಧಾರ್‌ ಮತ್ತು ಬ್ಯಾಂಕ್‌ ವಿವರ ಹೊಂದಾಣಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಎಲ್ಲವೂ ಸರಿ ಇದ್ದಲ್ಲಿ ಪರಿಗಣಿಸಿ, ಅವಕಾಶವಿದ್ದ ಎಲ್ಲ ಮಕ್ಕಳಿಗೂ ಸೌಲಭ್ಯ ಒದಗಿಸುತ್ತಿದ್ದೇವೆ.
– ನಾರಾಯಣ ಗೌಡ
ಜಂಟಿ ನಿರ್ದೇಶಕರು,
ಅಕ್ಷರ ದಾಸೋಹ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next