ನರಗುಂದ: ಮಲಪ್ರಭಾ ನದಿ ಪ್ರವಾಹಕ್ಕೆ ತಾಲೂಕಿನಲ್ಲಿ ಮೊದಲಿಗೆ ತುತ್ತಾಗುವ ಲಖಮಾಪುರ ಗ್ರಾಮವನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದು ಮನವರಿಕೆ ಮಾಡಿದ್ದೇನೆ. ಪರಿಹಾರ ಕಾರ್ಯ ಮುಗಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಭರವಸೆಯಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಶನಿವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ತಾಲೂಕಿನ ಗಡಿಗ್ರಾಮ ಲಖಮಾಪುರಕ್ಕೆ ತೆರಳಿ ಅಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಸಾಮಗ್ರಿ ಕಿಟ್ ವಿತರಿಸಿ ಮಾತನಾಡಿದ ಅವರು, ನೆರೆಹಾವಳಿ ಪರಿಸ್ಥಿತಿಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ವ್ಯವಸ್ಥೆ ಮತ್ತು ಪರಿಹಾರ ಕಾರ್ಯಗಳಿಗೆ ಮೊದಲಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಹಾನಿಗೊಳಗಾದ ಪ್ರತಿಯೊಂದು ಮನೆಯ ಹಾನಿಗೆ ತಕ್ಕಂತೆ ಸೂಕ್ತ ಪರಿಹಾರ ವಿತರಿಸಲು ಸರಕಾರ ಬದ್ಧವಾಗಿದೆ. ಈ ಬಗ್ಗೆ ಯಾರೂ ಆತಂಕ ಪಡುವುದು ಬೇಡ. ನೆರೆ ಹಾವಳಿಯಿಂದ ನೊಂದ ಎಲ್ಲ ಕುಟುಂಬಗಳ ನೆರವಿಗೆ ಸರಕಾರ ಧಾವಿಸಿದೆ ಎಂದು ಸಚಿವರು ಗ್ರಾಮಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮದ ಶಂಕರಗೌಡ ನಡಮನಿ ಮಾತನಾಡಿ, ಪ್ರತಿಸಾರಿ ಪ್ರವಾಹದಿಂದ ನಮ್ಮ ಗ್ರಾಮಕ್ಕೆ ಬಹಳಷ್ಟು ನಷ್ಟವಾಗುತ್ತಿದೆ. ಮುಖ್ಯವಾಗಿ ಗ್ರಾಮಕ್ಕೆ ಇರುವ ಏಕೈಕ ಮಾರ್ಗದ ಸೇತುವೆ ಈ ಸಾರಿ ಪ್ರವಾಹಕ್ಕೆ ಸಂಪೂರ್ಣ ಶಿಥಿಲಗೊಂಡಿದ್ದು, ಮೊದಲಿಗೆ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸ್ಥಳದಲ್ಲಿದ್ದ ಸಚಿವರಿಗೆ ಒತ್ತಾಯಿಸಿದರು.
ಮಲಪ್ರಭಾ ನದಿಗೆ ಅತಿ ಸಮೀಪವಿದ್ದ ಕಾರಣ ನೆರೆ ಹಾವಳಿ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದೇವೆ. ಪ್ರವಾಹ ಸ್ಥಿತಿಯಲ್ಲಿ ಇಡೀ ಗ್ರಾಮವನ್ನು ನೆರೆ ಸುತ್ತುವರೆದು ಹೊರ ಪ್ರಪಂಚದಿಂದ ಗ್ರಾಮ ಸಂಪೂರ್ಣ ಸಂಪರ್ಕ ಕಡಿತಗೊಳ್ಳುವ ಕಾರಣ ಕೂಡಲೇ ನರಗುಂದ ತಾಲೂಕು ವ್ಯಾಪ್ತಿಯಲ್ಲೇ ಸುರಕ್ಷಿತ ಸ್ಥಳದಲ್ಲಿ ನಮ್ಮ ಗ್ರಾಮ ಸ್ಥಳಾಂತರಿಸಬೇಕು. ಇದೇ ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಶಂಕರಗೌಡ ನಡಮನಿ ಆಗ್ರಹಿಸಿದರು. ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು, ಗ್ರಾಮದ ಪ್ರಮುಖರು ವೇದಿಕೆಯಲ್ಲಿದ್ದರು.