ಲಕ್ನೋ/ಡೆಹ್ರಾಡೂನ್: ಆನ್‌ಲೈನ್ ಗೇಮಿಂಗ್ ಆ್ಯಪ್ ಮೂಲಕ ಹದಿಹರೆಯದವರನ್ನು ಸೆಳೆದು, ಮತಾಂತರ ಮಾಡುವ ಹೊಸ ಆಘಾತಕಾರಿ ದಂಧೆಯೊಂದನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆಹಚ್ಚಿದ್ದಾರೆ. ಯುವ ಕರು ಮತ್ತು ಹದಿಹರೆಯದ ಮಕ್ಕಳನ್ನು ಗುರಿಯಾಗಿಸಿಕೊಂಡು “ಫೋರ್ಟ್‌ನೈಟ್” ಎಂಬ ಆನ್‌ಲೈನ್ ಆ್ಯಪ್ ಬಳಸಿ ಇಸ್ಲಾಮ್‌ಗೆ ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ದುಷ್ಕರ್ಮಿಗಳ ಜಾಲಕ್ಕೆ ಬಲಿಯಾಗಿ ಮತಾಂತರಗೊಂಡ ಅಪ್ರಾಪ್ತ ವಯಸ್ಸಿನ ನಾಲ್ವರನ್ನು (ಗಾಜಿಯಾಬಾದ್‌ನ ಇಬ್ಬರು, ಫರೀದಾಬಾದ್ ಮತ್ತು ಚಂಡೀಗಢದ ತಲಾ ಒಬ್ಬರು) ಗುರುತಿಸಲಾಗಿದೆ ಎಂದು ಗಾಜಿಯಾಬಾದ್ ಡಿಸಿಪಿ ನಿಪುಣ್ ಅಗರ್ವಾಲ್ ಹೇಳಿದ್ದಾರೆ.
ಹೇಗೆ ನಡೆಯುತ್ತಿತ್ತು ಪ್ರಕ್ರಿಯೆ?: “ಫೋರ್ಟ್‌ನೈಟ್” ಆ್ಯಪ್‌ನಲ್ಲಿ ಗೇಮ್ ಆಡುವಂಥ ಮಕ್ಕಳನ್ನೇ ಆರೋಪಿ ಶಹನವಾಜ್ ಖಾನ್ (ಈತನ ಡಿಜಿಟಲ್ ಹೆಸರು “ಬಡ್ಡೋ’) ಟಾರ್ಗೆಟ್ ಮಾಡುತ್ತಿದ್ದ. ಮಕ್ಕಳು ಆಟದಲ್ಲಿ ಸೋತೊಡನೆ, “ನೀವು ಗೇಮ್‌ನಲ್ಲಿ ಗೆಲ್ಲಬೇಕೆಂದರೆ ಕುರಾನ್‌ನ ಶ್ಲೋಕಗಳನ್ನು ಓದಬೇಕು” ಎಂದು ಹೇಳಿಕೊಡಲಾಗುತ್ತಿತ್ತು. ಅವರು ಹೇಳಿದಂತೆ ಮಾಡಿ ಆಟದಲ್ಲಿ ಗೆಲ್ಲುವ ಮಕ್ಕಳಿಗೆ ಕುರಾನ್ ಮೇಲೆ ನಂಬಿಕೆ ಬರಲು ಶುರುವಾಗುತ್ತದೆ. ಅನಂತರ ಅವರಿಗೆ ಝಾಕೀರ್ ನಾಯ್ಕ, ತಾರಿಕ್ ಜಮೀಲ್‌ರ ಭಾಷಣಗಳ ವೀಡಿಯೋಗಳನ್ನು ಕಳುಹಿಸಿ, ಪ್ರೇರೇಪಿಸಲಾಗುತ್ತಿತ್ತು ಎಂದು ತಿಳಿಸಲಾಗಿದೆ.
“ಉತ್ತರಕಾಶಿಯಲ್ಲಿ ಮಳಿಗೆ ತೆರವುಗೊಳಿಸಿ” ಪೋಸ್ಟರ್
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಅಪಹರಣ ಯತ್ನ ಪ್ರಕರಣ ಭಾರೀ ಸುದ್ದಿ ಮಾಡಿದ ಬೆನ್ನಲ್ಲೇ ಪುರೋಲಾದ ಅಂಗಡಿಗಳ ಬಾಗಿಲುಗಳಲ್ಲಿ ರಾತೋರಾತ್ರಿ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. “ಜೂ.15ರೊಳಗಾಗಿ ಅಂಗಡಿ ತೆರವುಗೊಳಿಸಿ” ಎಂದು ಅದರಲ್ಲಿ ಬರೆಯಲಾಗಿದೆ. ಅಪರಿಚಿತ ವ್ಯಕ್ತಿಗಳು ಈ ಪೋಸ್ಟರ್‌ಗಳನ್ನು ಹಾಕಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, “ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಲವ್ ಜೆಹಾದ್, ಲ್ಯಾಂಡ್ ಜೆಹಾದ್‌ನಂಥ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುತ್ತದೆ’ ಎಂದಿದ್ದಾರೆ.