Advertisement

ಮದುವೆಗಾಗಿ ಮತಾಂತರ ನಿಷೇಧ? ರಾಜ್ಯದಲ್ಲೂ ಕಾಯ್ದೆ ಜಾರಿಗೆ ನಿರ್ಧಾರ

12:53 AM Nov 04, 2020 | sudhir |

ಬೆಂಗಳೂರು: ರಾಜ್ಯದಲ್ಲೂ ಮದುವೆ ಕಾರಣಕ್ಕಾಗಿ ಧಾರ್ಮಿಕ ಮತಾಂತರವಾಗುವುದನ್ನು ನಿಷೇಧಿಸುವ ಕಾಯ್ದೆ ರೂಪಿಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

Advertisement

ಇತ್ತೀಚೆಗಷ್ಟೇ ಅಲಹಾಬಾದ್‌ ಹೈಕೋರ್ಟ್‌ ಮದುವೆಗಾಗಿ ಧಾರ್ಮಿಕ ಮತಾಂತರ ಸಲ್ಲದು ಎಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಮಂಗಳವಾರ ಟ್ವೀಟ್‌ ಮಾಡಿರುವ ಅವರು, ಜೆಹಾದಿಗಳು ನಮ್ಮ ಸಹೋದರಿಯರ ಘನತೆಗೆ ಚ್ಯುತಿ ಉಂಟು ಮಾಡುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲಾಗದು. ಮತಾಂತರ ಕಾಯ್ದೆಯಡಿ ಯಾರೇ ನಿಯಮ ಉಲ್ಲಂಘಿಸಿದರೂ ಅವರಿಗೆ ಗಂಭೀರ, ಕಠಿನ ಶಿಕ್ಷೆಯಾಗಬೇಕು ಎಂದು “ಖಡಕ್‌’ ಆಗಿ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲೂ “ಲವ್‌ ಜೆಹಾದ್‌’ ಬಗ್ಗೆ ಆಗಾಗ್ಗೆ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಅಲ್ಲಲ್ಲಿ ಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿಯೂ ಆಗಿರುವ ಸಚಿವ ಸಿ.ಟಿ. ರವಿ ಅವರೇ ಮದುವೆ ಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ರೂಪಿಸಲಾಗುವುದು ಎಂದು ಅಭಿಪ್ರಾಯಪಟ್ಟಿರುವುದು ಪರ- ವಿರೋಧದ ಚರ್ಚೆ ಹುಟ್ಟು ಹಾಕಿದೆ.

ಚಿಂತನೆ ಅಗತ್ಯ
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ. ರವಿ, ಮೋಸದಿಂದ ಪ್ರೀತಿ ನೆಪದಲ್ಲಿ ಮತಾಂತರಿಸುವ ಹಾಗೂ ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಇದರ ತಡೆಗೆ ಕಾಯ್ದೆ ತರುವ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು ಚಿಂತಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next