Advertisement

ಹೂಡಿಕೆ ಸಮಾವೇಶಗಳಿಗೆ ನಾವೇ ಮಾದರಿ: ಆರ್‌.ವಿ.ದೇಶಪಾಂಡೆ

03:45 AM Jan 07, 2017 | Team Udayavani |

ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಆಟೋಮೊಬೈಲ್‌ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯೂ ನೀತಿಗಳನ್ನು ರೂಪಿಸಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತ ಮೂಲದ ಜನರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಪ್ರವಾಸಿ ಭಾರತ್‌ ದಿವಸ್‌ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಭಾರತದ ಆರ್ಥಿಕ ಅಭಿವೃದ್ಧಿ ವಲಸಿಗರಿಗೆ ವ್ಯವಹಾರದಲ್ಲಿ ಅವಕಾಶ ಕುರಿತಂತೆ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕವು 2000ನೇ ಸಾಲಿನಲ್ಲಿ ಇನ್‌ವೆಸ್ಟ್‌ ಕರ್ನಾಟಕ ಪ್ರಾರಂಭಿಸಿತು. ನಂತರ ಇದೇ ಮಾದರಿಯಲ್ಲಿ ಹೂಡಿಕೆ ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ ದೇಶದ ಹಲವು ರಾಜ್ಯಗಳು ಅನುಕರಿಸಿದವು. ಐಟಿ, ಬಿಟಿ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ನೀತಿಗಳನ್ನು ರೂಪಿಸಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ಸೇರುತ್ತದೆ ಎಂದು ಹೇಳಿದರು.

ಕರ್ನಾಟಕ ಪ್ರಗತಿಪರ ಕೈಗಾರಿಕಾ ರಾಜ್ಯವಾಗಿದೆ. ಬಂಡವಾಳ ಹೂಡಿಕೆಗಾಗಿ ಪ್ರತಿ ರಾಜ್ಯಗಳಲ್ಲಿಯೂ ಸ್ಪರ್ಧೆ ಇದೆ. ಈ ಹಿಂದೆ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಖ್ಯಮಂತ್ರಿ ಮತ್ತು ಸಚಿವರನ್ನು ಔತಣಕೂಟಕ್ಕೆ ಆಹ್ವಾನಿಸುತ್ತಿದ್ದರು. ಆದರೆ, ಪರಿಸ್ಥಿತಿ ಈಗ ಬದಲಾಗಿದೆ. ಮೊದಲಿನಂತೆ ಉದ್ಯಮಿಗಳು ಔತಣಕೂಟ ಆಯೋಜಿಸುತ್ತಿಲ್ಲ. ಬದಲಿಗೆ ಮುಖ್ಯಮಂತ್ರಿಗಳೇ ಉದ್ಯಮಿಗಳನ್ನು ಆಹ್ವಾನಿಸಿ ತಮ್ಮಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಎಂದರು.

ಶನಿವಾರದಿಂದ  ಮೂರು ದಿನಗಳ ಕಾಲ ನಗರದಲ್ಲಿ ಏರ್ಪಡಿಸಿರುವ ಪ್ರವಾಸಿ ಭಾರತೀಯ ದಿವಸ್‌ ಕಾರ್ಯಕ್ರಮದಲ್ಲಿ ರಾಜ್ಯದ ಶಕ್ತಿ ಪ್ರದರ್ಶನ ನಡೆಯಲಿದೆ. ಇನ್ವೆಸ್ಟ್‌ ಕರ್ನಾಟಕ ಮತ್ತು ನವೋದ್ಯಮ ಎಂಬ ಎರಡು ಸಮಾರಂಭವು ಸಹ ಸಮಾವೇಶದಲ್ಲಿ ಜರುಗಲಿದೆ. ಇದರಲ್ಲಿ ನಮ್ಮ ನೀತಿ, ಕೈಗಾರಿಕಾ ಅವಕಾಶಗಳನ್ನು ಬಿಂಬಿಸಿ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಪ್ರವಾಸಿ ಭಾರತೀಯ ದಿವಸ್‌ ಕೇವಲ ಹೂಡಿಕೆಗಾಗಿ ಮಾತ್ರ ಆಯೋಜಿಸಿರುವ ಸಮಾವೇಶವಲ್ಲ.  ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವುದರ ಜತೆಗೆ ಅನಿವಾಸಿಗಳ ಸಮಸ್ಯೆ, ಅವರ ಅಭಿಪ್ರಾಯಗಳ ಆಲಿಕೆ, ವೀಸಾ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆ ಹಾಗೂ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ ಎಂದು ವಿವರಿಸಿದರು.

14ನೇ ಪ್ರವಾಸಿ ಭಾರತೀಯ ದಿವಸ್‌ ಸಮಾವೇಶ ಇದಾಗಿದ್ದು, 64 ದೇಶಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಅನಿವಾಸಿ ಭಾರತೀಯರ ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ  ಇತರೆ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಸಮಾವೇಶದಲ್ಲಿ ಉದ್ಯಮಿಗಳಿಂದ ಬರುವ ಎಲ್ಲಾ ಪ್ರಸ್ತಾವಗಳನ್ನು ಸ್ವೀಕರಿಸಲಾಗುವುದು. ನವೋದ್ಯಮ ವಿಷಯದಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಶೀಘ್ರ ಗತಿಯಲ್ಲಿ ಪ್ರಸ್ತಾವಗಳಿಗೆ ಅನುಮತಿ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಟಿಪಿಐ ಮಾಜಿ ನಿರ್ದೇಶಕ ಡಾ.ಬಿ.ನಾಯ್ಡು, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next