ಕುಣಿಗಲ್ : ನ್ಯಾಯಾಲಯದ ದಾಖಲೆ ಫೈಲ್ ಸಂಬಂಧ ಇಬ್ಬರು ಅಧಿಕಾರಿಗಳ ನಡುವೆ ವಾಗ್ವಾದ ನಡೆದು, ಕುಪಿತಗೊಂಡ ರಾಜಸ್ವ ನಿರೀಕ್ಷಕ ಗ್ರಾಮ ಲೆಕ್ಕಿಗನ ಮೇಲೆ ಹಲ್ಲೆ ನಡೆಸಿದ್ದು ಇದನ್ನು ಖಂಡಿಸಿ ಗ್ರಾಮಲೆಕ್ಕಿಗರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.
ಎಡಿಯೂರು ರಾಜಸ್ವ ನಿರೀಕ್ಷಕ ಚಂದ್ರಯ್ಯ, ಗ್ರಾಮಲೆಕ್ಕಿಗ ಆರ್.ಯಶವಂತ್ ಮೇಲೆ ಹಲ್ಲೆ ನಡೆಸಿದ್ದಾರೆ, ತಹಶೀಲ್ದಾರ್ ಅವರು ಸೂಕ್ತ ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘ, ತಾಲೂಕು ಘಟಕ ಪದಾಧಿಕಾರಿಗಳು ಇಲ್ಲಿನ ತಾಲೂಕು ಕಚೇರಿಯ ಮೆಟ್ಟಿಲ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಬಂದ ಶಿರಸ್ತೇದಾರರ ಮನವರಿಕೆಯಿಂದ ತಕ್ಷಣ ಪ್ರತಿಭಟನೆಯನ್ನು ವಾಪಸ್ ಪಡೆಯುವ ಮೂಲಕ ಹೈಡ್ರಾಮ ನಡೆಯಿತು.
ತಾಲೂಕು ಕಚೇರಿಯಿಂದ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ದಾಖಲೆ ಮಾಡಿಕೊಡಬೇಕಾಗಿರುವ ಅಧಿಕಾರಿಗಳೇ ಫೈಲ್ ವಿಚಾರವಾಗಿ ಇಬ್ಬರು ಅಧಿಕಾರಿಗಳು ಬೈದಾಡಿಕೊಂಡು, ರಾಜಸ್ವ ನಿರೀಕ್ಷಕ ತಮ್ಮ ಕೈ ಕೆಳಗಿನ ಅಧಿಕಾರಿ ಗ್ರಾಮ ಲೆಕ್ಕಿಗನ ಮೇಲೆ ಹಲ್ಲೆ ನಡೆಸಿರುವುದು, ನಾಗರಿಕರ ಚರ್ಚೆಗೆ ಗ್ರಾಸವಾಗಿದೆ.
ತಹಶೀಲ್ದಾರ್‌ಗೆ ದೂರು
ತಾಲೂಕು ಕಚೇರಿಯಲ್ಲಿ ಕರ್ತವ್ಯನಿರತ ಗ್ರಾಮಲೆಕ್ಕಿಗ ಆರ್, ಯಶವಂತ್ ಅವರ ಮೇಲೆ ಎಡಿಯೂರು ಹೋಬಳಿ ರಾಜಸ್ವ ನಿರೀಕ್ಷಕ ಚಂದ್ರಯ್ಯ ಗ್ರಾಮ ಲೆಕ್ಕಿಗನನ್ನು ಅವಾಚ್ಯವಾದ ಶಬ್ದಗಳಿಂದ ನಿಂಧಿಸಿ ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ, ತಮ್ಮ ಅಧೀನ ನೌಕರರ ಮೇಲೆ ಹಲ್ಲೆ ಮಾಡಿರುವ ಘಟನೆಯಿಂದ ಹಲ್ಲೆಗೆ ಒಳಗಾದ ನೌಕರರನ ಮತ್ತು ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿದ್ದು ಸಾಮಾಜಿಕ ನ್ಯಾಯಕ್ಕಾಗಿ ಈ ಅಮಾನವೀಯ ಘಟನೆ ವಿರುದ್ದ ಈ ಕೂಡಲೇ ಹಲ್ಲೆ ಮಾಡಿರುವ ಚಂದ್ರಯ್ಯ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ನೊಂದ ಗ್ರಾಮ ಲೆಕ್ಕಾಧಿಕಾರಿಗೆ ನ್ಯಾಯ ಒದಗಿಸಿ ಕೊಡುವ ಜತೆಗೆ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಕೈಗೊಂಡು ಗ್ರಾಮಲೆಕ್ಕಾಧಿಕಾರಿಗಳು ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅನುಮಾಡಿಕೊಡಬೇಕೆಂದು ತಹಶೀಲ್ದಾರ್‌ಗೆ ಅವರಿಗೆ ನೀಡಿರುವ ದೂರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘ, ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ್ ಮನವಿ ಮಾಡಿದ್ದಾರೆ.
Related Articles
ಕಾರಣ ಕೇಳಿ ನೋಟಿಸ್
ಘಟನೆ ಸಂಬಂಧಿಸಿದಂತೆ ಉದಯವಾಣಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಹಶೀಲ್ದಾರ್ ಮಹಬಲೇಶ್ವರ ಯಾವ ವಿಚಾರವಾಗಿ ಗಲಾಟೆ ನಡೆದಿದೆ ಎಂಬುದು ವಿಚಾರ ತಿಳಿದಿಲ್ಲ, ಆದರೆ ಇಬ್ಬರು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿರುವೆ, ಇಬ್ಬರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.