ನಗರದ ಮಾಲಿನ್ಯದಲ್ಲಿ ವಾಹನಗಳ ಪಾಲು ದೊಡ್ಡದು. ಅದರಲ್ಲಿ ಶಬ್ದಮಾಲಿನ್ಯವೂ ಒಂದು. ಇದಕ್ಕೆ ಮುಖ್ಯ ಕಾರಣ ಕರ್ಕಶ ಹಾರ್ನ್. ಕೆಲವು ಬಸ್, ಟೆಂಪೋ ಸಹಿತ ಘನ ವಾಹನಗಳಲ್ಲಿ ವಾಕ್ಯೂಮ್ ಹಾರ್ನ್ ಗಳನ್ನು ಇಂದಿಗೂ ಬಳಸಲಾಗುತ್ತಿದೆ. ವಾಹನ ದಟ್ಟಣೆಯಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಹೇಗಾದರೂ ಮುಂದಕ್ಕೆ ಸಂಚರಿಸಬೇಕು ಎಂಬ ಧಾವಂತದಲ್ಲಿರುವ ಇಂತಹ ವಾಹನಗಳು ವಾಕ್ಯೂಮ್ ಹಾರ್ನ್ ಬಳಸುತ್ತವೆ.
ಇದು ಅನೇಕ ಬಾರಿ ದ್ವಿಚಕ್ರ, ಆಟೋರಿಕ್ಷಾಗಳಲ್ಲಿ ಪ್ರಯಾಣಿಸುವವರನ್ನು, ರಸ್ತೆ ಬದಿ ನಿಂತಿರುವ ಮತ್ತು ನಡೆದುಕೊಂಡು ಹೋಗುವವರನ್ನು ಗಲಿಬಿಲಿಗೊಳಿಸುತ್ತದೆ. ಹತ್ತಿರ ಬಂದಾಗ ಏಕಾಏಕೀ ಹಾರ್ನ್ ಹಾಕುವಾಗ ಒಮ್ಮೆಗೇ ಎದೆಬಡಿತ ನಿಂತ ಅನುಭವವೂ ಆಗುತ್ತದೆ. “ಹಾರ್ನ್ ನಿಷೇಧಿತ ಪ್ರದೇಶ’ವೆಂದು ಗುರುತಿಸಲಾಗುವ ಶಾಲಾ ಕಾಲೇಜು, ಆಸ್ಪತ್ರೆ ಮೊದಲಾದ ಪರಿಸರದಲ್ಲಿಯೂ ಹಾರ್ನ್ ಹಾವಳಿ ಇದೆ.
ವಾಹನ ಚಾಲನೆ ಮಾಡುವವರಿಗೆ ಇದರ ಅರಿವೇ ಇದ್ದಂತಿಲ್ಲ. ಕೆಲವೊಮ್ಮೆ ಟ್ರಾಫಿಕ್ ಜಾಮ್ ಆದಾಗ ನಿರಂತರವಾಗಿ ಹಾರ್ನ್ ಹಾಕುವವರಿದ್ದಾರೆ. ಇದು ಕೂಡ ಸಾರ್ವಜನಿಕರಿಗೆ ವಿಪರೀತ ಕಿರಿಕಿರಿಯನ್ನುಂಟು ಮಾಡುತ್ತದೆ.
ಸಂಚಾರಿ ಪೊಲೀಸರು ಕರ್ಕಶ ಹಾರ್ನ್ ಬಳಕೆ ಮಾಡುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಾರಾದರೂ ಇದು ಅಪರೂಪ ಎನ್ನುವಂತಿದೆ. ಇಂತಹ ಕರ್ಕಶ ಹಾರ್ನ್ ಬಳಕೆ ಮಾಡುವವರ, ನಿರಂತರ ಹಾರ್ನ್ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವವರ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಬೇಕಿದೆ.
ವಾಹನ ಚಾಲಕರು, ಸವಾರರು ಕೂಡ ಹಾರ್ನ್ ಬಳಕೆಯ ಮೇಲೆ ಮಿತಿ ಹಾಕಿಕೊಳ್ಳಬೇಕು. ಇನ್ನು ಬೈಕ್‌ಗಳಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಸೈಲೆನ್ಸರ್‌ಗಳ ಬಳಕೆ ಕೂಡ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಶೋಕಿಗಾಗಿ ತಮ್ಮ ಬೈಕ್‌ಗಳ ಸೈಲೆನ್ಸರ್‌ಗಳ ವಿನ್ಯಾಸ ಬದಲಿಸಿ ಹೆಚ್ಚಿನ ಶಬ್ದ ಬರುವಂತೆ ಮಾಡುವವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು. ಮುಖ್ಯವಾಗಿ ಜನನಿಬಿಢ ಸ್ಥಳದಲ್ಲಿ ಈ ರೀತಿಯ ಸದ್ದು ಮಾಡುವ ಸೈಲೆನ್ಸರ್‌ಗಳುಳ್ಳ ದ್ವಿಚಕ್ರ ವಾಹನಗಳ ಸಂಚಾರವನ್ನೇ ನಿಷೇಧಿಸಬೇಕು.