Advertisement

ಚಿನ್ನ, ತೈಲ ಆಮದು ನಿಯಂತ್ರಣಕ್ಕೆ ಶುಲ್ಕಾಸ್ತ್ರ

12:56 AM Jul 02, 2022 | Team Udayavani |

ಕಚ್ಚಾ ತೈಲ ಮತ್ತು ಚಿನ್ನದ ಆಮದು ಹಾಗೂ ರಫ್ತುಗಳ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿದೆ. ಪೆಟ್ರೋಲ್‌, ಡೀಸೆಲ್‌ ರಫ್ತಿನ ಮೇಲೆ ಕ್ರಮವಾಗಿ ಪ್ರತೀ ಲೀಟರ್‌ಗೆ 6 ರೂ., 13 ರೂ.ಗಳನ್ನು ವಿಧಿಸಲು ತೀರ್ಮಾನಿಸಿದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಹಾಲಿ ಶೇ.10.75ರಿಂದ ಶೇ. 15ಕ್ಕೆ ಹೆಚ್ಚಿಸಲಾಗಿದೆ. ಕಚ್ಚಾ ತೈಲದ ಮೇಲೆ ಪ್ರತೀ ಟನ್‌ಗೆ 23,250 ರೂ.ಗಳನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ) ಎಂದು ವಿಧಿಸಲಾಗುತ್ತದೆ.

Advertisement

ಯಾವ ಕಾರಣಕ್ಕಾಗಿ ಸೆಸ್‌ ವಿಧಿಸಲಾಗಿದೆ?
ದೇಶದಲ್ಲಿರುವ ಕಚ್ಚಾ ತೈಲ ಉತ್ಪಾದಕರು ಇತರ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರದಲ್ಲಿ ಮಾರಾಟ ಮಾಡಿ, ಲಾಭ ಪಡೆಯುವುದನ್ನು ತಡೆಯಲು ಇಂಥ ಕ್ರಮ ಕೈಗೊಳ್ಳಲಾಗಿದೆ. ರಿಫೈನರಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಅನುಸಾರವಾಗಿ ತೈಲೋತ್ಪನ್ನಗಳನ್ನು ರಫ್ತು ಮಾಡುತ್ತಾರೆ. ಇದರಿಂದಾಗಿ ದೇಶೀಯ ಮಾರುಕಟ್ಟೆಗೆ ಕೊರತೆ ಉಂಟಾಗುತ್ತದೆ. ಹೀಗಾಗಿ ರಫ್ತು ಕುಂಠಿತಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟು ಮಾತ್ರವಲ್ಲದೆ, ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದಲ್ಲಿ ಕೂಡ ತೈಲೋತ್ಪನ್ನ ರಫ್ತು ಮಾಡುವ ಕಂಪೆನಿಗಳು ಶೇ. 50ರಷ್ಟು ಉತ್ಪನ್ನಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬಗ್ಗೆ ಘೋಷಣೆಯನ್ನೂ ಮಾಡಿಕೊಳ್ಳಬೇಕು.

ಬದಲಾವಣೆ ಏಕೆ?
ಜೂನ್‌ನಲ್ಲಿ ದೇಶದ ಕೆಲವು ನಗರಗಳಲ್ಲಿ ಇರುವ ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಮಾಡುವುದರ ಮೇಲೆ ನಿಯಂತ್ರಣ ಹೇರಿಕೊಂಡಿದ್ದವು. ಹೀಗಾಗಿ ನಾಗರಿಕರಲ್ಲಿ ಪೆಟ್ರೋಲ್‌, ಡೀಸೆಲ್‌ ಖರೀದಿಗೆ ಸರಕಾರದ ವತಿಯಿಂದಲೇ ಮಿತಿ ಹೇರಲಾಗಿದೆ ಎಂಬ ಭಾವನೆಯೂ ಮೂಡಿತ್ತು. ಆದರೆ ಸರಕಾರ ದೇಶದಲ್ಲಿ ತೈಲ ಸಂಗ್ರಹ ಸಾಕಷ್ಟು ಇದೆ ಎಂದು ಹೇಳಿತ್ತು. ಅಮೆರಿಕದ ಡಾಲರ್‌ ಎದುರು ರೂಪಾಯಿ ಸತತ ಕುಸಿತ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು, ಖಾಸಗಿ ತೈಲ ಕಂಪೆನಿಗಳು ಚಿಲ್ಲರೆ ಮಾರಾಟದಿಂದ ನಷ್ಟ ಉಂಟಾಗುತ್ತಿವೆ ಎಂದು ಪ್ರಕಟಿಸಿದವು. ಹೀಗಾಗಿಯೇ ಜೂ.15ರ ವೇಳೆಗೆ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶದ ಕೆಲವು ನಗರಗಳ ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಕೊರತೆ ಕಂಡು ಬಂದಿದ್ದವು.

ಚಿನ್ನದ ಆಮದಿಗೆ ಏಕೆ ಸುಂಕ?
ಇತ್ತೀಚಿನ ದಿನಗಳಲ್ಲಿ ಚಿನ್ನದ ಆಮದು ಹೆಚ್ಚಾಗಿದೆ. ಮೇನಲ್ಲಿ 107 ಟನ್‌ ಚಿನ್ನ ಆಮದು ಮಾಡಲಾಗಿತ್ತು. ಇದು ಚಾಲ್ತಿ ಖಾತೆಯ ಕೊರತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆಮದು ಸುಂಕವನ್ನು ಶೇ.10.75ರಿಂದ ಶೇ.15ಕ್ಕೆ ಏರಿಕೆ ಮಾಡಲಾಗಿದೆ. ಈ ಹಿಂದೆ ಕನಿಷ್ಠ ಕಸ್ಟಮ್ಸ್‌ ಸುಂಕ ಶೇ.7.5 ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next