Advertisement

ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ

11:49 AM Jan 16, 2019 | Team Udayavani |

ಬೆಳಗಾವಿ: ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡಿರುವ ಕೊಡುಗೆಯನ್ನು ಭಾರತದ ಬೇರೆ ಯಾವುದೇ ರಾಜ್ಯದಲ್ಲಿ ನೀಡಿಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿವೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದ ಸೇಂಟ್ ಕ್ಸೇವಿಯರ್‌ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಬೆಳಗಾವಿ ಧರ್ಮ ಪ್ರಾಂತ್ಯ ಶಿಕ್ಷಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಕಠೊರ ನಿಲುವು ತಾಳಬಾರದು. ಹೆಚ್ಚಿನ ಒತ್ತಡ ಹೇರುವ ಕೆಲಸ ಮಾಡಬಾರದು. ತಾವು ಶಿಕ್ಷಣ ಸಚಿವರಾಗಿದ್ದ ವೇಳೆ ಶೈಕ್ಷಣಿಕ ಕ್ಷೇತ್ರಕ್ಕೆ ಬಿಸಿಯೂಟ, ಸೈಕಲ್‌ ವಿತರಣೆ ಸೇರಿದಂತೆ ಅನೇಕ ಸರ್ಕಾರಿ ಶಾಲೆಯಗಳಲ್ಲಿದ್ದ ಸೌಲಭ್ಯಗಳನ್ನು ಖಾಸಗಿ ಶಾಲೆಗಳಿಗೂ ನೀಡುವ ಮೂಲಕ ಪ್ರಗತಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು.

ಧರ್ಮ ಪ್ರಾಂತ್ಯ ಶಿಕ್ಷಣ ಮಂಡಳಿ 50 ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಜೊತೆಗೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ, ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು. ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತಿರುವ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕಾರ್ಯನಿವರ್ಹಿಸುತ್ತಿದ್ದಾರೆ ಎಂದ ಅವರು, ತಾವು ಕಲಿತ ಸಂಸ್ಥೆಯ ಹುಬ್ಬಳ್ಳಿಯಲ್ಲಿರುವ ಶಾಲೆಯಲ್ಲಿ 2 ವರ್ಷ ದೈಹಿಕ ಶಿಕ್ಷಣ ಶಿಕ್ಷಕನಾಗಿ ಕಾರ್ಯನಿರ್ವಹಿಸಿರುವ ದಿನಗಳನ್ನು ಬಸವರಾಜ ಹೊರಟ್ಟಿ ಸ್ಮರಿಸಿಕೊಂಡರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ದೇಶಾದ್ಯಂತ ಕ್ರೈಸ್ತ ಮಿಷನರಿಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ದೇಶದಲ್ಲಿ ಇದರಿಂದ ಶೈಕ್ಷಣಿಕ ಕ್ಷೇತ್ರ ಹೆಮ್ಮರವಾಗಿ ಬೆಳೆದಿದೆ. ಜತೆಗೆ ಆರೋಗ್ಯ ಕ್ಷೇತ್ರಕ್ಕೂ ಇವರ ಕೊಡುಗೆ ಅಪಾರ. ಶಿಕ್ಷಣ-ಆರೋಗ್ಯ ಕ್ಷೇತ್ರಗಳು ಸುಧಾರಣೆಯಾಗಲು ಮಿಷನರಿಗಳ ಸಹಕಾರ ಹೆಚ್ಚಾಗಿದೆ. ಇದು ಇನ್ನೂ ಮುಂದುವರಿದಿರುವುದು ಒಳ್ಳೆಯ ಬೆಳವಣಿಗೆ ಎಂದರು.

ದೇಶದಲ್ಲಿ ಇನ್ನೂ ಶೇ. 30ರಿಂದ 35ರಷ್ಟು ಅನಕ್ಷರತೆ ಇದ್ದು, ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ತನ್ನ ಅಂಗಸಂಸ್ಥೆ ಸ್ಥಾಪಿಸುವ ಮೂಲಕ ಅಥವಾ ಶಿಕ್ಷಣದ ಜಾಗೃತಿ ಮೂಡಿಸುವ ಮೂಲಕ ಅನಕ್ಷರತೆ ಹೋಗಲಾಡಿಸಲು ಶ್ರಮಿಸಬೇಕು ಎಂದರು.

Advertisement

ಸಂಸದ ಸುರೇಶ ಅಂಗಡಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ರೂಪಿಸಬೇಕು. ರ್‍ಯಾಂಕ್‌ ಗಳಿಸಲೇಬೇಕು ಎಂದು ಪಾಲಕರು ಮಕ್ಕಳ ಮೇಲೆ ಒತ್ತಡ ಹೇರುವುದನ್ನು ಬಿಡಬೇಕು ಎಂದರು.

ಬೆಂಗಳೂರಿನ ಆರ್ಚ್‌ ಬಿಷಪ್‌ ಪೀಟರ್‌ ಮಚಾಡೊ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಐಎಎಸ್‌ ಅಧಿಕಾರಿ ಆರ್‌. ವಿಶಾಲ, ಸಂಸ್ಥೆಯ ಆಡಳಿತಾಧಿಕಾರಿ ಫಾದರ್‌ ಈಸುಬಿಯಾ ಫನಾಂರ್ಡೀಸ್‌, ಸಂಸ್ಥೆಯ ಕಾರ್ಯದರ್ಶಿ ಫಾದರ್‌ ಆಲ್ವಿನ್‌ ಸುಧೀರ, ಫಾದರ್‌ ಥಾಮಸ್‌ ಚಂಪಾಕರ ಇದ್ದರು.

ಹೊರಟ್ಟಿ ಸಚಿವರಾಗ್ತಾರೆ, ಯಾವ್‌ ಪಾರ್ಟಿಯಿಂದ ಅಂತ ಹೇಳಲ್ಲ: ಕೋರೆ
ಬೆಳಗಾವಿ: ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಮುಂದಿನ ದಿನಗಳಲ್ಲಿ ಶಿಕ್ಷಣ ಸಚಿವರಾಗುವ ಸಾಧ್ಯತೆ ಇದೆ. ಆದರೆ ಯಾವ ಪಕ್ಷದಿಂದ ಎಂಬುದನ್ನು ಮಾತ್ರ ಹೇಳುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಒಗಟಿನ ಮಾತನಾಡಿದರು. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹೊರಟ್ಟಿ ಅವರ ಕೊಡುಗೆ ಅಪಾರ. ಶೈಕ್ಷಣಿಕ ವ್ಯವಸ್ಥೆಯ ಆಳ-ಅಗಲ ತಿಳಿದುಕೊಂಡಿದ್ದಾರೆ. ಆದರೆ ಅವರದು ರೈಟ್ ಪರ್ಸ್‌ನ್‌ ಇನ್‌ ರಾಂಗ್‌ ಪಾರ್ಟಿ ಎನ್ನುವ ಪರಿಸ್ಥಿತಿಯಾಗಿದೆ. ಹೊರಟ್ಟಿ ಉತ್ತಮ ವ್ಯಕ್ತಿತ್ವ ಹೊಂದಿದ್ದರೂ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಸಚಿವ ಸ್ಥಾನದ ಬಯಕೆ
ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ನನಗೆ ಅಪಾರ ಕಾಳಜಿ ಇರುವುದರಿಂದ ಆಗಾಗ ಶಿಕ್ಷಣ ಸಚಿವನಾಗಿದ್ದೇನೆ. ಈಗಲೂ ನಾನು ಶಿಕ್ಷಣ ಸಚಿವನಾಗಬೇಕೆಂಬ ಬಯಕೆ ಹೊಂದಿದ್ದೇನೆ. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸೇರಿದಂತೆ ವಿರೋಧ ಪಕ್ಷದಲ್ಲಿರುವ ಅನೇಕ ಸ್ನೇಹಿತರು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ನನಗೆ ಶಿಕ್ಷಣ ಖಾತೆ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಇನ್ನೂ ಸಿಕ್ಕಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮದಲ್ಲಿ ಅಸಮಾಧಾನ ತೋಡಿಕೊಂಡರು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಪ್ರತಿಕ್ರಿಯಿಸಿ, ಶಿಕ್ಷಣ ಕ್ಷೇತ್ರದಲ್ಲಿ ಹೊರಟ್ಟಿ ಅವರ ಕೊಡುಗೆ ಅಪಾರ. ಶೈಕ್ಷಣಿಕ ವ್ಯವಸ್ಥೆಯ ಆಳ-ಅಗಲ ತಿಳಿದುಕೊಂಡಿದ್ದಾರೆ. ರೈಟ್ ಪರ್ಸನ್‌ ಇನ್‌ ರಾಂಗ್‌ ಪಾರ್ಟಿ ಎಂಬ ಮಾತು ಹೊರಟ್ಟಿಗೆ ಸರಿಯಾಗಿ ಅನ್ವಯಿಸುತ್ತಿದೆ. ಹೊರಟ್ಟಿ ಉತ್ತಮ ವ್ಯಕ್ತಿತ್ವ ಹೊಂದಿದ್ದರೂ ಪಕ್ಷ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದ ಅವರು, ಹೊರಟ್ಟಿ ಮುಂದಿನ ದಿನಗಳಲ್ಲಿ ಶಿಕ್ಷಣ ಸಚಿವರಾಗುವ ಸಾಧ್ಯತೆ ಇದೆ. ಆದರೆ ಯಾವ ಪಕ್ಷದಿಂದ ಆಗುತ್ತಾರೆ ಎಂಬುದನ್ನು ಹೇಳುವುದಿಲ್ಲ ಎಂದು ಹೇಳುವ ಮೂಲಕ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next