ಕಲಬುರಗಿ: ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಕೈಗೊಳ್ಳುವ ಮೂಲಕ ಭಾರತವನ್ನು ಜಗತ್ತಿನಲ್ಲಿ ಶ್ರೇಷ್ಠ ರಾಷ್ಟ್ರವನ್ನಾಗಿ ರೂಪಿಸಲು ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಹೈದ್ರಾಬಾದನ ಇಸ್ರೋದ ರಾಷ್ಟ್ರೀಯ ರಿಮೋಟ್ ವಿಜ್ಞಾನ ಕೇಂದ್ರ ಹಾಗೂ ನಾಸಾದ ನಿವೃತ್ತ ವಿಜ್ಞಾನಿ ನಾರಾಯಣ ಇನಾಮದಾರ ಕರೆ ನೀಡಿದರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆದ ‘ಆವಿಷ್ಕಾರೋತ್ಸವ-2019’ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಭಾರತ ಮಾಹಿತಿ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಾ ಪ್ರಪಂಚದ ಶ್ರೇಷ್ಠ ರಾಷ್ಟ್ರದತ್ತ ದಾಪುಗಾಲು ಹಾಕುತ್ತಿದೆ. ವಿದ್ಯಾರ್ಥಿಗಳು ನೂತನ ಆವಿಷ್ಕಾರಗಳ ಮೂಲಕ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಬೇಕೆಂದು ಸಲಹೆ ನೀಡಿದರು.
ಈ ಹಿಂದೆ ಭಾರತವನ್ನು ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಆದರೆ, ಇಂದು ದೇಶದ ದಿಕ್ಕು ದಿಸೆ ಬದಲಾಗಿದ್ದು, ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ತವರು ರಾಷ್ಟ್ರಕ್ಕೆ ಮರಳುವ ತವಕದಲ್ಲಿದ್ದಾರೆ ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ರವೀಂದ್ರ ಎಸ್. ಹೆಗಡಿ ಮಾತನಾಡಿ, ಸದ್ಯ ಸ್ಟಾರ್ಟ್‌ಅಪ್‌ಗ್ಳಿಗೆ ಹೆಚ್ಚಿನ ಉತ್ತೇಜನ ಸಿಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಉತ್ಪನ್ನಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆಲೋಚಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ, ಹಿರಿಯ ಮಾರ್ಗದರ್ಶಕ ಶಂಭುಲಿಂಗಯ್ಯ, ಶಿಕ್ಷಕ ಸಿದ್ದಪ್ಪ, ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.
ಆವಿಷ್ಕಾರೋತ್ಸವಕ್ಕೆ ತೆರೆ: ವಿದ್ಯಾರ್ಥಿಗಳನ್ನು ಯುವ ವಿಜ್ಞಾನಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಮೂರು ದಿನಗಳಿಂದ ನಡೆದ ಆವಿಷ್ಕಾರೋತ್ಸವ-2019ಕ್ಕೆ ಶುಕ್ರವಾರ ತೆರೆ ಬಿತ್ತು. ಆವಿಷ್ಕಾರೋತ್ಸವದಲ್ಲಿ ವಿವಿಧ ಶಾಲಾ-ಕಾಲೇಜುಗಳ 38 ತಂಡಗಳು, ಉದಯೋನ್ಮುಖ ವಿಜ್ಞಾನಿಗಳ 18 ತಂಡಗಳು ಪಾಲ್ಗೊಂಡು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಿದವು. ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ಅತ್ಯುತ್ತಮ ಆವಿಷ್ಕಾರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೃಷಿ, ಆರ್ಟ್ ಆ್ಯಂಡ್ ಕ್ರಾಫ್ಟ್ ಮತ್ತು ಪರಿಸರ, ವಿಜ್ಞಾನ-ಗಣಿತ ಹಾಗೂ ಇಂಜಿನಿಯರಿಂಗ್ ತಂತ್ರಜ್ಞಾನ ವಿಭಾಗದ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನಿವೃತ್ತ ವಿಜ್ಞಾನಿ ನಾರಾಯಣ ಇನಾಮದಾರ, ಡಾ| ರವೀಂದ್ರ ಎಸ್.ಹೆಗಡಿ ವಿತರಿಸಿದರು.